ಬೆಂಗಳೂರು, (ಏ.18): ಮಾಜಿ ಸಚಿವ ಎಚ್. ಎಂ ರೇವಣ್ಣ ಅವರು ಅನಾರೋಗ್ಯದ ನಡುವೆಯೂ ಬಂದು ಮತದಾನ ಮಾಡಿದ್ದಾರೆ.

ಹಲವು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಎಚ್.ಎಂ.ರೇವಣ್ಣ ಅವರು ಬೆಂಗಳೂರಿನಲ್ಲಿರುವ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದರು.

Live Updates: ಮತ ಮಾಡಿ ಹೋದವರಿಗೆ ಫ್ರೀ ಬೆಣ್ಣೆ ದೋಸೆ

ಇಂದು ಮತದಾನ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದ ರೇವಣ್ಣ, ಮಹಾಲಕ್ಷ್ಮಿ ಲೇಔಟ್‍ನ ಡಾ.ಬಿ.ಅರ್. ಅಂಬೇಡ್ಕರ್ ಸ್ಮಾರಕ ವಿದ್ಯಾಕೇಂದ್ರದ 141 ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬಳಿಕ ಮಾತನಾಡಿದ ಎಚ್. ಎಂ ರೇವಣ್ಣ, 'ನನಗೆ ಸ್ಪೈನಲ್ ಕಾರ್ಡ್ ತೊಂದರೆ ಇದೆ. ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಮತದಾನ ತಪ್ಪಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಚಿಕಿತ್ಸೆ ನಡುವೆ ಮತದಾನಕ್ಕೆ ಬಂದೆ ಎಂದು ಸ್ಪಷ್ಟಪಡಿಸಿದರು.

ಯಾರು ಕೂಡ ಮತದಾನ ಮಾಡೋದನ್ನು ತಪ್ಪಿಸಿಕೊಳ್ಳಬಾರದು. ನಾನು ಒಬ್ಬ ರಾಜಕೀಯ ವ್ಯಕ್ತಿಯಾಗಿ ವೋಟ್ ಮಾಡದೇ ಇದ್ದರೆ ತಪ್ಪಾಗುತ್ತೆ' ಎಂದರು.

ನಗರದ ಜನಕ್ಕಿಂತ ಹಳ್ಳಿ ಜನರು ಹೆಚ್ಚಾಗಿ ವೋಟ್ ಮಾಡುತ್ತಿದ್ದಾರೆ. ನಗರದ ಜನರು ಹೆಚ್ಚು ವೋಟ್ ಮಾಡಿ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವಂತೆ ಮಾಜಿ ಸಚಿವ ಎಚ್. ಎಂ ರೇವಣ್ಣ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.