ಯಾದಗಿರಿ[ಏ. 17]  ಮಲ್ಲಿಕಾರ್ಜುನ  ಖರ್ಗೆ ಎಂದೂ ಅಧಿಕಾರದ ಹಿಂದೆ ಬಿದ್ದಿಲ್ಲ. ಅಧಿಕಾರವೇ ಖರ್ಗೆ ಹಿಂದೆ ಬಂದಿದೆ. ಚಿಂಚನಸೂರು, ಜಾಧವ್, ಗುತ್ತೇದಾರ್, ಮಾಲಕರೆಡ್ಡಿ ಬಂದರೂ ಹೋದರು. ಗುತ್ತೇದಾರ್ ಹೌಸಿಂಗ್ ಬೋರ್ಡ್ ಚೇರ್ ಮೆನ್ ಮಾಡಿದ್ರು ಬಿಟ್ಟ ಹೋದರು. ಜಾಧವ್ ಗೆ ಮಂತ್ರಿ ಮಾಡುವೆ ಅಂತ ಹೇಳಿದ್ದೆ. ಪಕ್ಷ ದ್ರೋಹಿ ಜಾಧವ್  ಅವರನ್ನು ಸೋಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರಿಸಿದ್ದಾರೆ.

ಜಾಧವ್ ಗೆ ಮಾನ ಮರ್ಯಾದೆ ಇದೇಯಾ? ಖರ್ಗೆಯನ್ನು ಸೋಲಿಸಲು ಬಿಜೆಪಿ ಮುಂದಾಗಿದೆ.  ಜಾಧವ್ ಗೆದ್ದರೆ ಪಾರ್ಲಿಮೆಂಟ್ ನಲ್ಲಿ ಖರ್ಗೆ ಜಾಗ ತುಂಬಲು ಆಗಲ್ಲ. ಬಿಜೆಪಿ ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ. ರೈತರ ಬಗ್ಗೆ ಮಾತನಾಡಲು ಮೋದಿಗೆ ಯಾವ ನೈತಿಕತೆ ಇದೆ? ಮೋದಿ ಮತ್ತು ಯಡಿಯೂರಪ್ಪ ಸಾಲಮನ್ನಾ ಮಾಡಲು ಆಗಲ್ಲ ಅಂದವರು ರೈತರ ಪರ ಹೇಗೆ ಇದ್ದಾರೆ? ನಾನು ನನ್ನ ಸರ್ಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ರೈತರ ಸಾಲ ಮನ್ನಾ ಮಾಡಲು ಮೋದಿಗೆ ಏನು ರೋಗ ಬಂದಿದೆ. 371 (ಜೆ) ಕಲಂ ಜಾರಿಗೆ ತರಲು ಕಾಂಗ್ರೆಸ್ ಮತ್ತು ಖರ್ಗೆ ಕೊಡುಗೆ ಇದೆ. ಇಂಥಾ ಒಂದೇ ಕೆಲಸ ಬಿಜೆಪಿಯವರು ಮಾಡಿದ್ದೇನೆ ಅಂತ ಹೇಳಲಿ ಎಂದು  ಮಾಜಿ ಸಿಎಂ ಸವಾಲು ಹಾಕಿದರು.

27  ಜನ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ಎಲ್ಲರೂ ಪ್ರಚಾರದ ವೇಳೆಯಲ್ಲಿ  ನನ್ನ ಮುಖ ನೋಡಬೇಡಿ, ಮೋದಿ ಮುಖ ನೋಡಿ ಓಟು ಹಾಕಿ ಅಂತ ಪ್ರಚಾರ ನಡೆಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಗಳ ಮೇಲೆ ವಾಗ್ದಾಳಿ ಮಾಡಿದರು.

'ಬಿಜೆಪಿಯಲ್ಲಿ ಶ್ರೀರಾಮಲು ಯ್ಯೂಸ್ ಆ್ಯಂಡ್ ಥ್ರೋ'

ಅಂಬಿಗರ ಚೌಡಯ್ಯ ನಿಗಮ ಮಾಡಿದ್ದು ನಾನು. 27 ಕ್ಷೇತ್ರದಲ್ಲಿ ಬಿಜೆಪಿ  ಒಬ್ಬ ಹಿಂದುಳಿದವರಿಗೆ ಟಿಕೆಟ್ ನೀಡಿಲ್ಲ. ನಾವೂ 8 ಜನ ಹಿಂದುಳಿದವರಿಗೆ ಟಿಕೆಟ್ ನೀಡಿದ್ದೇವೆ. ಅದರಲ್ಲಿ ಮೂರು ಜನ ಕುರುಬರಿಗೆ ಟಿಕೆಟ್ ನೀಡಿದ್ದೇವೆ. ಈಶ್ವರಪ್ಪ ಇಷ್ಟು ಅಗಲ ಬಾಯಿ ತೆರೆಯುತ್ತಾರೆ. ಆದ್ರೆ ಬಿಜೆಪಿ ರಾಜ್ಯದ ತುಂಬ ಕುರುಬರಿಗೆ ಒಂದೂ ಟಿಕೆಟ್ ನೀಡಿಲ್ಲ.  ಹಿಂದುಳಿದವರಿಗೆ ಸ್ವಾಭಿಮಾನ ಇದ್ದರೆ ಬಿಜೆಪಿಗೆ ಒಂದೇ ಒಂದೇ ವೋಟ್ ಬಿಜೆಪಿಗೆ ಹಾಕಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.

ಈಶ್ವರಪ್ಪ ಮೆದುಳಿಗೂ ಹಾಗೂ ಬಾಯಿಗೂ ಲಿಂಕ್ ತಪ್ಪಿದೆ. ಹೀಗಾಗಿ ಈಶ್ವರಪ್ಪ ಬಾಯಿಗೆ ಬಂದಾಗ ಮಾತನಾಡುತ್ತಾನೆ. ಸಂಸದ ಅನಂತ ಕುಮಾರ ಹೆಗಡೆ ಗ್ರಾಮ ಪಂಚಾಯತ್ ಸದಸ್ಯನಾಗಲು ಕೂಡ ಯೋಗ್ಯನಲ್ಲ ಎಂದು ಏಕವಚನದಲ್ಲಿ ದಾಳಿ ಮಾಡಿದರು.

ಮೋದಿಗೆ ಖರ್ಗೆ ಕಂಡರೆ ಗಡಗಡ ನಡುಕ.  ಹೀಗಾಗಿ ಜಾಧವ್ ನನ್ನು ಬಿಜೆಪಿ ಸೆಳೆದಿದೆ. ಖರ್ಗೆ ಮುಖ್ಯ ಅಲ್ಲ  ಆದರೆ ಚುನಾವಣೆ ಯಲ್ಲಿ ಸಂವಿಧಾನ ಉಳಿಯಬೇಕು. ಮೋದಿ ಸರ್ವಾಧಿಕಾರಿ ಆಗಬಾರದು. ಖರ್ಗೆ ಗೆಲ್ಲಿಸಿದ್ದರೆ ನೀವೂ ಗೆದ್ದಂತೆ ಎಂದು ಸಿದ್ದರಾಮಯ್ಯ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.