ಹಾಸನ[ಮಾ.25]: ಹಾಸನ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ನೇರಾನೇರ ಹೋರಾಟಕ್ಕೆ ಅಖಾಡ ಸಿದ್ಧವಾಗಿದೆ. ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಮತ್ತು ಬಿಜೆಪಿಯಿಂದ ಮಾಜಿ ಸಚಿವ ಎ.ಮಂಜು ನಡುವೆ ಸ್ಪರ್ಧೆ ನಡೆಯಲಿದೆ. ಹೀಗಾಗಿ ಈ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ.

ಸ್ವಾತಂತ್ರ್ಯ ಬಂದ ನಂತರ 1952 ರಿಂದ ಇಲ್ಲಿಯವರೆಗೂ ನಡೆದಿರುವ ಎಲ್ಲಾ ಚುನಾವಣೆಗಳಲ್ಲೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾ ಜಿದ್ದಿ ನಡೆದಿದೆ. ಬಿಜೆಪಿ ಅವರೆಡು ಪಕ್ಷಗಳ ಸಮೀಪ ಕೂಡ ಸುಳಿಯಲು ಆಗಿರಲಿಲ್ಲ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಸೀಟು ಹೊಂದಾಣಿಕೆ ಆಗಿರುವ ಪರಿಣಾಮ ಇದೇ ಪ್ರಥಮ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಹೂಡಿಲ್ಲ.

ಇದರ ಪರಿಣಾಮ ಜೆಡಿಎಸ್‌ ಮತ್ತು ಬಿಜೆಪಿ ನಡುವೆಯೇ ಸಮರ ನಡೆಯಬೇಕಿದೆ. ಹಾಸನ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ ಬಿಟ್ಟು ಕೊಡಲು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರ ಮಾಡಿದ ಕೂಡಲೇ ಕಾಂಗ್ರೆಸ್‌ ಮುಖಂಡರಾಗಿದ್ದ ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರಿ, ಅಭ್ಯರ್ಥಿಯಾಗಿದ್ದಾರೆ. ಮಂಜು ಸೇರ್ಪಡೆ ಬಿಜೆಪಿ ಅನಿವಾರ್ಯ ಕೂಡ ಆಗಿತ್ತು. ಸಚಿವರಾಗಿ, ಶಾಸಕರಾಗಿ ಜಿಲ್ಲೆಯ ನಾಡಿಮಿಡಿತವನ್ನು ಬಲ್ಲ ಮಂಜು ಸ್ಪರ್ಧೆಯಿಂದ ಬಿಜೆಪಿ ಈ ಚುನಾವಣೆಯಲ್ಲಿ ಮುಖ್ಯವಾಹಿನಿಗೆ ಬಂದಿದೆ. ಪ್ರಜಾಕೀಯ ಸೇರಿದಂತೆ ವಿವಿಧ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಪೈಪೋಟಿ ನೀಡಲು ಸಾಧ್ಯವಾಗದು. ಮಂಜುಗೆ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಬಲ ಮತ್ತು ಪಕ್ಷದ ಸಂಪ್ರದಾಯಿಕ ಮತಗಳು ಶ್ರೀರಕ್ಷೆಯಾಗಲಿದೆ. ಹಾಗೆಯೇ ಪ್ರಜ್ವಲ್‌ ರೇವಣ್ಣಗೆ ಮಾಜಿ ಪ್ರಧಾನಿ ದೇವೇಗೌಡರ ವರ್ಚಸ್ಸು ಮತ್ತು ಸಚಿವ ಎಚ್‌.ಡಿ.ರೇವಣ್ಣನವರ ಅಭಿವೃದ್ಧಿ ಕೆಲಸಗಳು ಮತಗಳನ್ನು ತಂದು ಕೊಡಬಹುದು ಎಂಬ ವಿಶ್ವೇಷಣೆ ನಡೆಯುತ್ತಿದೆ.

ಬಿಜೆಪಿ ಒಮ್ಮೆಯೂ ಗೆದ್ದಿಲ್ಲ:

ಹಾಸನ ಜಿಲ್ಲೆ ಲೋಕಸಭಾ ಚುನಾವಣೆ ಇತಿಹಾಸದಲ್ಲೇ ಈವರೆಗೂ ರಾಷ್ಟ್ರೀಯ ಪಕ್ಷ ಬಿಜೆಪಿ ಗೆದ್ದಿರುವ ಇತಿಹಾಸ ಇಲ್ಲ. 1952, 1957, 1962, 1971, 1980, 1984, 1989 ಮತ್ತು 1999 ರಲ್ಲಿ ಕಾಂಗ್ರೆಸ್‌ ಗೆದ್ದಿದ್ದರೆ, 1967ರಲ್ಲಿ ಸ್ವತಂತ್ರ ಪಾರ್ಟಿ, 1977 ಭಾರತೀಯ ಲೋಕದಳ, 1991, 1996, 1998, 2004, 2009 ಮತ್ತು 2014 ರಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದೆ.

ಒಕ್ಕಲಿಗರದ್ದೇ ಅಧಿಪತ್ಯ:

ಹಾಸನ ಲೋಕಸಭಾ ಕ್ಷೇತ್ರದ ಮತ್ತೊಂದು ವಿಶೇಷತೆ ಎಂದರೆ ಈವರೆಗೆ ಒಟ್ಟು 16 ಮಂದಿ ಜಿಲ್ಲೆಯಿಂದ ಸಂಸದರಾಗಿ ಲೋಕಸಭೆ ಪ್ರವೇಶ ಮಾಡಿದ್ದಾರೆ. ಇವರಲ್ಲಿ 15 ಮಂದಿ ಒಕ್ಕಲಿಗ ಸಮುದಾಯ ಪ್ರತಿನಿಧಿಗಳಾಗಿದ್ದಾರೆ. ಒಬ್ಬರು ಮಾತ್ರ ವೀರಶೈವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸ್ವಾತಂತ್ರ್ಯ ನಂತರ ನಡೆದ ಮೊದಲ ಚುನಾವಣೆಯಲ್ಲಿ ಗೆದ್ದಿದ್ದ ಎಚ್‌.ಸಿದ್ಧನಂಜಪ್ಪ ಒಬ್ಬರೇ ವೀರಶೈವರು. ಅವರು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಉಳಿದಂತೆ ಎನ್‌.ಶಿವಪ್ಪ, ನಂಜೇಶ್‌ಗೌಡ, ಎಚ್‌.ಎನ್‌.ನಂಜೇಗೌಡ, ಎಚ್‌.ಸಿ.ಶ್ರೀಕಂಠಯ್ಯ, ಎಚ್‌.ಡಿ.ದೇವೇಗೌಡ, ವೈ.ಎನ್‌.ರುದ್ರೇಶ್‌ಗೌಡ, ಜಿ.ಪುಟ್ಟಸ್ವಾಮಿಗೌಡ ಎಲ್ಲರೂ ಒಂದೇ ಸಮುದಾಯಯದವರು ಅನ್ನೋದು ಗಮನಾರ್ಹ.

ಬಂದರು, ಹೋದವರು:

ಇನ್ನು ಹಾಸನ ಲೋಕಸಭೆ ಚುನಾವಣೆ ಇತಿಹಾಸನದಲ್ಲಿ ಹೊರಗಿನಿಂದ ಬಂದು ಸ್ಪರ್ಧೆ ಮಾಡಿದ ಮೊದಲಿಗರೆಂದರೆ ಮೈಸೂರಿನಿಂದ ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಸಿ.ಎಚ್‌.ವಿಜಯಶಂಕರ್‌. ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾಸನದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

-ದಯಾಶಂಕರ ಮೈಲಿ

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ