ಮಂಡ್ಯ, [ಏ.10]: ಮಾಜಿ ಸಂಸದ, ಕಾವೇರಿ ಹೋರಾಟಗಾರ ಜಿ.ಮಾದೇಗೌಡ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಡಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಚುನಾವಣಾ ಖರ್ಚಿಗಾಗಿ ಹಣದ ಬೇಡಿಕೆ ಇಟ್ಟಿದ್ದ ಸಂಬಂಧ ಚುನಾವಣಾಧಿಕಾರಿ ಜಗದೀಶ್ ದೂರು ಆಧರಿಸಿ ಐಪಿಸಿ ಸೆಕ್ಷನ್ 171(ಇ)ರ ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣವನ್ನು ಚುನಾವಣಾ ಆಯೋಗಕ್ಕೆ ವರ್ಗಾಯಿಸಿದ್ದಾರೆ.

ಮಂಡ್ಯದಲ್ಲಿ ಹಣದ ಮಾತು: JDS ಮಿನಿಸ್ಟರ್-ಮಾಜಿ ಸಂಸದ ಆಡಿಯೋ ವೈರಲ್..!

ಮಂಡ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿರುವ ಮಾದೇಗೌಡ ಅವರು ಪುಟ್ಟರಾಜುಗೆ ಫೋನ್ ಕರೆ ಮಾಡಿ ಕ್ಯಾಂಪೇನ್ ಗೆ ಹಣ ಕಳುಹಿಸಿ ಎಂದು ಹೇಳಿದ್ದರು.  ಅದಕ್ಕೆ ಸಚಿವರು ಹಣದ ವ್ಯವಸ್ಥೆ ಮಾಡುವುದಾಗಿ ಉತ್ತರಿಸಿದ್ದರು. 

ಈ ಆಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು RTI ಕಾರ್ಯಕರ್ತ ರವೀಂದ್ರ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದ್ದರು. ಇವರ ದೂರನ್ನು ಆಧರಿಸಿ ಚುನಾವಣಾಧಿಕಾರಿಗಳು ಮಂಡ್ಯ ಪಶ್ಚಿಮ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ. 

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.