ನವದೆಹಲಿ(ಮೇ.02): ಚುನಾವಣಾ ಪ್ರಚಾರಗಳಲ್ಲಿ ಬಾಲಾಕೋಟ್ ವಾಯುದಾಳಿ ಪ್ರಸ್ತಾಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಚುನಾವಣಾ ಪ್ರಚಾರಗಳಲ್ಲಿ ಬಾಲಾಕೋಟ್ ಏರ್ ಸ್ಟ್ರೈಕ್ ಪ್ರಸ್ತಾಪಿಸುವುದು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದಿರುವ ಆಯೋಗ, ಪ್ರಧಾನಿ ಇದೇ ವಿಷಯವನ್ನು ಮುಂದೆ ಮಾಡಿ ನೇರವಾಗಿ ಎಂದೂ ಮತ ಕೇಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಲಾತೂರ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ, ಬಾಲಾಕೋಟ್ ನಲ್ಲಿ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಹಾಗೂ ಪುಲ್ವಾಮದಲ್ಲಿ ಪ್ರಾಣತ್ಯಾಗ ಮಾಡಿದ್ದ ಹಿರೋಗಳಿಗೆ ನಿಮ್ಮ ಮೊದಲ ಮತ ಅರ್ಪಿಸಿ ಎಂದು ಯುವ ಸಮೂಹಕ್ಕೆ ಕರೆ ನೀಡಿದ್ದರು. 

ಪ್ರಧಾನಿ ನರೇಂದ್ರ ಮೋದಿ ಅವರ ಈ ಹೇಳಿಕೆಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆಯೋಗಕ್ಕೆ ವಿಪಕ್ಷಗಳು ದೂರು ನೀಡಿದ್ದವು. 

ಆದರೆ ದೂರಿನ ಬಗ್ಗೆ ಈಗ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಪ್ರಧಾನಿ ಮೋದಿ ಅವರ ಅಂದಿನ ಭಾಷಣದಲ್ಲಿ ಯಾವುದೇ ನೀತಿ ಸಂಹಿತೆಯೂ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ