ಬೆಂಗಳೂರು :  ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್‌ ಪಾಲಾಗಿರುವುದರಿಂದ ಆಕ್ರೋಶಗೊಂಡಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಜೆಡಿಎಸ್‌-ಕಾಂಗ್ರೆಸ್‌ ನಾಯಕರ ಸಭೆಯಿಂದ ದೂರ ಉಳಿದರು.

ಅಷ್ಟೇ ಅಲ್ಲ,   ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಬಳಿಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸಂಸದರಿರುವ ಹತ್ತು ಕ್ಷೇತ್ರಗಳ ಪೈಕಿ ತುಮಕೂರು ಕ್ಷೇತ್ರ ಮಾತ್ರ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ದೇಶದಲ್ಲೇ ಹಾಲಿ ಸಂಸದರ ಹಾಗೂ ಪ್ರಸ್ತುತ ಚುನಾವಣೆಯನ್ನೂ ಗೆಲ್ಲಬಲ್ಲ ಕ್ಷೇತ್ರವನ್ನು ಮೊದಲ ಬಾರಿಗೆ ಬಿಟ್ಟುಕೊಟ್ಟಿದ್ದೀರಿ. ಈ ಮೂಲಕ ಜಿಲ್ಲೆಯ ನಾಯಕನಾಗಿರುವ ನನಗೆ ಹಾಗೂ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರಿಗೆ ತೀವ್ರ ನೋವುಂಟು ಮಾಡಿದ್ದೀರಿ. ಈ ಬಗ್ಗೆ ಪದೇ ಪದೇ ಮನವಿ ಸಲ್ಲಿಸಿದ್ದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಖುದ್ದು ರಾಹುಲ್‌ ಗಾಂಧಿ ಬಳಿ ಅಸಮಾಧಾನ ತೋಡಿಕೊಂಡರು ಎನ್ನಲಾಗಿದೆ.

ಇದರ ಬೆನ್ನಲ್ಲೇ ಸೋಮವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಜೆಡಿಎಸ್‌-ಕಾಂಗ್ರೆಸ್‌ ನಾಯಕರ ಸಭೆಗೂ ಪರಮೇಶ್ವರ್‌ ಗೈರು ಹಾಜರಾದರು. ಈ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಶುರುವಾದ ಬೆನ್ನಲ್ಲೇ ಟ್ವೀಟರ್‌ ಮೂಲಕ ಸ್ಪಷ್ಟನೆ ನೀಡಿರುವ ಪರಮೇಶ್ವರ್‌, ಪೂರ್ವ ನಿಯೋಜಿತ ಕಾರ್ಯಕ್ರಮದ ಕಾರಣ ಸೋಮವಾರ ನಡೆದ ಜೆಡಿಎಸ್‌-ಕಾಂಗ್ರೆಸ್‌ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಪಕ್ಷದ ಹಿರಿಯ ನಾಯಕರೆಲ್ಲಾ ಸೇರಿ ಚರ್ಚಿಸಿ ರಣತಂತ್ರ ರೂಪಿಸಿದ್ದೇವೆ. ಅಂತೆಯೇ ಜಂಟಿಯಾಗಿ ಚುನಾವಣೆಗೆ ದುಡಿಯಲಿದ್ದೇವೆ ಎಂದು ಹೇಳಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ