ಬೆಂಗಳೂರು (ಮಾ. 29):  ಶಾಮನೂರು ಕುಟುಂಬದವರೇ ಸ್ಪರ್ಧಿಸಬೇಕು ಎಂದು ಕೆಪಿಸಿಸಿ ನಾಯಕತ್ವದ ಒತ್ತಾಯ. ಈ ಬಾರಿ ನಮಗೆ ಬೇಡ. ಬದಲಾಗಿ ಕುರುಬ ಸಮುದಾಯದ ಮಂಜಪ್ಪ ಅವರಿಗೆ ಟಿಕೆಟ್‌ ನೀಡಿ ಎಂದು ಶಾಮನೂರು ಕುಟುಂಬದ ಪಟ್ಟು. ಪರಿಣಾಮ- ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಅಖೈರುಗೊಳ್ಳುವುದು ಇನ್ನೂ ಕಗ್ಗಂಟಾಗಿಯೇ ಮುಂದುವರೆದಿದೆ.

ಪಕ್ಷದಿಂದ ಹೊರ ಹಾಕುವ ಎಚ್ಚರಿಕೆ ನೀಡಿದ ಎಚ್‌ಡಿಡಿ

ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಅಖೈರುಗೊಳಿಸಲು ಕಾಂಗ್ರೆಸ್‌ನಲ್ಲಿ ಗುರುವಾರ ಸರಣಿ ಸಭೆ ನಡೆದರೂ ಸ್ಪಷ್ಟನಿರ್ಧಾರಕ್ಕೆ ಬರಲಾಗಿಲ್ಲ. ಆದರೆ, ಶಾಮನೂರು ಕುಟುಂಬ ಸ್ಪರ್ಧೆಗೆ ಸುತಾರಾಂ ಒಪ್ಪದ ಹಿನ್ನೆಲೆಯಲ್ಲಿ ದಾವಣಗೆರೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಂಜಪ್ಪ ಅವರ ಹೆಸರನ್ನು ಅಂತಿಮಗೊಳಿಸುವ ಅನಿವಾರ್ಯಕ್ಕೆ ಕಾಂಗ್ರೆಸ್‌ ನಾಯಕತ್ವ ಸಿಲುಕುವ ಸಂಭವವಿದೆ.

ಗುರುವಾರ ಸರಣಿ ಸಭೆ ನಡೆಸಿ ಸ್ಪರ್ಧೆಗೆ ಒಪ್ಪುವಂತೆ ಕಾಂಗ್ರೆಸ್‌ ನಾಯಕರು ಒತ್ತಾಯ ಮಾಡಿದರೂ ಸ್ಪರ್ಧೆಗೆ ಶಾಮನೂರು ಕುಟುಂಬ ಸಿದ್ಧವಾಗುತ್ತಿಲ್ಲ. ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಸ್ಪರ್ಧೆಗೆ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹೀಗಾಗಿ ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರೇ ಕಣಕ್ಕೆ ಇಳಿಯಲಿ ಎಂಬುದು ಕಾಂಗ್ರೆಸ್‌ ನಾಯಕತ್ವದ ಒತ್ತಾಯ. ಆದರೆ, ಶಾಮನೂರು ಕುಟುಂಬ ತಮ್ಮ ಬದಲಾಗಿ ಮಂಜಪ್ಪ ಅವರ ಹೆಸರನ್ನು ಶಿಫಾರಸು ಮಾಡುತ್ತಿದೆ.

ನಿಖಿಲ್‌ ಹೆಸರಲ್ಲಿ ಅಭ್ಯರ್ಥಿಗಳ ನಿಲ್ಲಿಸುವಂತೆ ನನಗೂ ಹೇಳಿದ್ದರು!

ಆದರೆ, ಕುರುಬ ಸಮುದಾಯಕ್ಕೆ ಸೇರಿದ ಇಬ್ಬರಿಗೆ ಈಗಾಗಲೇ (ಮೈಸೂರಿನಲ್ಲಿ ವಿಜಯಶಂಕರ್‌ ಮತ್ತು ಹಾಗೂ ಕೊಪ್ಪಳದಲ್ಲಿ ಕೆ.ರಾಜಶೇಖರ್‌ ಹಿಟ್ನಾಳ್‌) ಟಿಕೆಟ್‌ ನೀಡಲಾಗಿದೆ. ಹೀಗಾಗಿ ಅದೇ ಸಮುದಾಯಕ್ಕೆ ಸೇರಿದ ಮಂಜಪ್ಪ ಅವರಿಗೆ ಟಿಕೆಟ್‌ ನೀಡುವುದು ಜಾತಿ ಸಮೀಕರಣ ದೃಷ್ಟಿಯಿಂದ ಸರಿ ಹೊಂದುವುದಿಲ್ಲ ಎಂಬುದು ಕಾಂಗ್ರೆಸ್‌ ನಾಯಕರವಾದ. ಆದರೆ, ಸ್ಪರ್ಧಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಮನವೊಲಿಸಲು ಕಾಂಗ್ರೆಸ್‌ ನಾಯಕರು ಗುರುವಾರ ತೀವ್ರ ಪ್ರಯತ್ನ ನಡೆಸಿದರು. ಮೊದಲು ಕೆಪಿಸಿಸಿ ಕಚೇರಿಯಲ್ಲಿ ದಿನೇಶ್‌ ಗುಂಡೂರಾವ್‌ ಸಭೆ ನಡೆಸಿದರು.

ಅಲ್ಲಿ ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್‌ ಅವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಅವರ ಭೇಟಿ ಮಾಡಿ ಮಾತುಕತೆ ನಡೆಸಿದರು. ಸಿದ್ದರಾಮಯ್ಯ ಅವರು ನಿಮ್ಮ ಕುಟುಂಬದಿಂದಲೇ ಒಬ್ಬರು ಸ್ಪರ್ಧಿಸುವುದು ಉತ್ತಮ ಎಂದು ಸಲಹೆ ನೀಡಿದರು ಎನ್ನಲಾಗಿದೆ.

ಇದಾದ ನಂತರ ಮತ್ತೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ದಿನೇಶ್‌ ಗುಂಡೂರಾವ್‌ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಕುಟುಂಬದಿಂದಲೇ ಒಬ್ಬರು ಸ್ಪರ್ಧಿಸಬೇಕು ಎಂಬುದು ಪಕ್ಷದ ನಿಲುವು. ಹೀಗಾಗಿ ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಶಾಮನೂರು ಕುಟುಂಬಕ್ಕೆ ತಿಳಿಸಿದರು ಎನ್ನಲಾಗಿದೆ. ಇದಾದ ನಂತರ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್‌ ಅವರು ಯೋಚಿಸಿ ಹೇಳುವುದಾಗಿ ಕಚೇರಿಯಿಂದ ತೆರಳಿದ್ದಾರೆ.

ಆದರೆ, ಮೂಲಗಳ ಪ್ರಕಾರ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಗಟ್ಟಿನಿರ್ಧಾರವನ್ನು ಶಾಮನೂರು ಕುಟುಂಬ ತೆಗೆದುಕೊಂಡಿದ್ದು, ಅನಿವಾರ್ಯವಾಗಿ ಮಂಜಪ್ಪ ಅವರನ್ನೇ ಕಣಕ್ಕೆ ಇಳಿಸುವ ಅನಿವಾರ್ಯತೆ ಪಕ್ಷಕ್ಕೆ ನಿರ್ಮಾಣವಾಗಬಹುದು ಎನ್ನಲಾಗಿದೆ.

ತೇಜಸ್ ಪಟೇಲ್ ದಾವಣಗೆರೆ ಅಭ್ಯರ್ಥಿ?

ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಲಿಂಗಾಯತ ಸಮುದಾಯಕ್ಕೆ ನೀಡುವ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಸಹೋದರನ ಪುತ್ರ ತೇಜಸ್ ಪಟೇಲ್ ಅವರ ಹೆಸರನ್ನು ಕಾಂಗ್ರೆಸ್ ನಾಯಕತ್ವ ಪರಿಗಣಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ಶಾಮನೂರು ಕುಟುಂಬ ನಿರಾಕರಿಸಿದೆ.

ಅಲ್ಲದೆ, ಕುರುಬ ಸಮುದಾಯದ ಮಂಜಪ್ಪ ಅವರಿಗೆ ಟಿಕೆಟ್ ನೀಡುವಂತೆ ಪಕ್ಷಕ್ಕೆ ಶಿಫಾರಸು ಮಾಡುತ್ತಿದೆ. ಆದರೆ, ಕುರುಬ ಸಮುದಾಯಕ್ಕೆ ಸೇರಿದ ಮಂಜಪ್ಪ ಅವರಿಗೆ ಟಿಕೆಟ್ ನೀಡಿದರೆ ಆ ಸಮುದಾಯದ ಮೂರು ಜನರಿಗೆ ರಾಜ್ಯದಲ್ಲಿ ಈ ಬಾರಿ ಟಿಕೆಟ್ ನೀಡಿದಂತೆ ಆಗಲಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಬೇಕು ಎಂಬ ಕಾರಣಕ್ಕೆ ಲಿಂಗಾಯತ ಸಮುದಾಯಕ್ಕೆ ಸೇರಿದ ತೇಜಸ್ ಪಟೇಲ್ ಅವರ ಹೆಸರನ್ನು ಪಕ್ಷ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.