ಕಾಂಗ್ರೆಸ್‌ ವಿರುದ್ಧ ಬಿಜೆಪಿ ‘ಹಿಂದು ಅಸ್ತ್ರ’| ಹಿಂದು ಉಗ್ರವಾದ ಪದ ಬಳಕೆಗೆ ಕಿಡಿ| ಶಾಂತಿಪ್ರಿಯ ಧರ್ಮಕ್ಕೆ ಉಗ್ರ ಪಟ್ಟಕಟ್ಟಲು ಕಾಂಗ್ರೆಸ್‌ ಯತ್ನ| ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ತೀವ್ರ ವಾಗ್ದಾಳಿ

ವಾರ್ಧಾ[ಏ.02]: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಗದ್ದುಗೆಗೆ ಏರಲು ಶತಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ಸಿನ ವಿರುದ್ಧ ಬಿಜೆಪಿ ‘ಹಿಂದು’ ಅಸ್ತ್ರವನ್ನು ಸೋಮವಾರ ಪ್ರಯೋಗಿಸಿದೆ. ಹಿಂದು ಧರ್ಮಕ್ಕೆ ಕಾಂಗ್ರೆಸ್‌ ಪಕ್ಷ ಭಯೋತ್ಪಾದನೆಯನ್ನು ತಳಕು ಹಾಕಲು ಯತ್ನಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ತೀವ್ರವಾಗಿ ಹರಿಹಾಯ್ದಿದ್ದಾರೆ. ಹಿಂದುಗಳು ಈಗ ಎಚ್ಚೆತ್ತಿದ್ದು, ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದ್ದಾರೆ.

ಮಹಾರಾಷ್ಟ್ರದ ವಾರ್ಧಾದಲ್ಲಿ ಬಿಜೆಪಿ- ಶಿವಸೇನೆ ಮಿತ್ರಕೂಟದ ಪ್ರಚಾರಕ್ಕೆ ಚಾಲನೆ ನೀಡಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಹಿಂದು ಉಗ್ರವಾದ ಹೆಸರಿನಲ್ಲಿ ಕೋಟ್ಯಂತರ ಜನರಿಗೆ ಕಳಂಕ ಬಳಿಯಲು ಕಾಂಗ್ರೆಸ್‌ ಯತ್ನಿಸಿತ್ತು. ಹಿಂದು ಭಯೋತ್ಪಾದನೆ ಎಂಬ ಪದ ಕೇಳಿದಾಗ ನಿಮಗೆ ನೋವಾಗಲಿಲ್ಲವೇ? ಸಹಸ್ರಾರು ವರ್ಷಗಳ ಇತಿಹಾಸದಲ್ಲಿ ಹಿಂದು ಧರ್ಮ ಭಯೋತ್ಪಾದನೆಯಲ್ಲಿ ತೊಡಗಿತ್ತು ಎಂಬುದಕ್ಕೆ ಒಂದೇ ಒಂದು ನಿದರ್ಶನ ಇದೆಯೇ? ಶಾಂತಿ ಪ್ರಿಯ ಹಿಂದುಗಳನ್ನು ಭಯೋತ್ಪಾದನೆ ಜತೆ ಜೋಡಿಸುವ ಪಾಪ ಎಸಗಿರುವ ಕಾಂಗ್ರೆಸ್‌ ಪಕ್ಷವನ್ನು ನೀವು ಕ್ಷಮಿಸುತ್ತೀರಾ?’ ಎಂದು ಪ್ರಶ್ನಿಸಿದರು.

ತನಗೆ ಈ ಬಾರಿ ದೇಶ ಶಿಕ್ಷಿಸುತ್ತದೆ ಎಂಬುದು ಕಾಂಗ್ರೆಸ್ಸಿಗೂ ಗೊತ್ತಾಗಿದೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಲು ಹಲವು ನಾಯಕರು ಹಿಂಜರಿಯುತ್ತಿದ್ದಾರೆ. ಯಾರನ್ನು ಕಾಂಗ್ರೆಸ್‌ ಭಯೋತ್ಪಾದಕರು ಎಂದು ಕರೆದಿತ್ತೋ ಅವರೆಲ್ಲಾ ಎಚ್ಚೆತ್ತಿದ್ದಾರೆ ಎಂದು ಹರಿಹಾಯ್ದರು.

ಕೇರಳದ ವಯನಾಡ್‌ನಿಂದ ಕಣಕ್ಕಿಳಿಯಲು ಮುಂದಾಗಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಮೋದಿ, ಶಾಂತಿಪ್ರಿಯ ಹಿಂದುಗಳನ್ನು ಭಯೋತ್ಪಾದನೆ ಜತೆ ತಳಕು ಹಾಕಿದವರು ಈಗ ಹೆದರಿದ್ದಾರೆ. ಬಹುಸಂಖ್ಯಾತ ಜನರು ಇರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಭೀತಿಗೆ ಒಳಗಾಗಿದ್ದಾರೆ. ಬಹುಸಂಖ್ಯಾತರು ಎಲ್ಲಿ ಅಲ್ಪಸಂಖ್ಯಾತರಾಗಿದ್ದಾರೋ ಅಲ್ಲಿಗೆ ಹೋಗಿದ್ದಾರೆ ಎಂದು ಕುಟುಕಿದರು.

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಒಂದು ಕಾಲದಲ್ಲಿ ಪ್ರಧಾನಿಯಾಗುವ ಕನಸು ಕಂಡಿದ್ದರು. ಆದರೆ ಈ ಬಾರಿ ಅವರು ಚುನಾವಣೆಯಿಂದಲೇ ದೂರ ಸರಿದಿದ್ದಾರೆ. ಅವರಿಗೆ ಗಾಳಿ ತಮ್ಮ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿದೆ ಎಂಬುದು ಗೊತ್ತಾಗಿ ಹೋಗಿದೆ ಎಂದು ಲೇವಡಿ ಮಾಡಿದರು.

ಹಿಂದುಗಳಿಗೆ ಉಗ್ರ ಪಟ್ಟಕಟ್ಟಲು ಯತ್ನ- ಶಾ:

ಅತ್ತ ಒಡಿಶಾದ ಬೆರ್ಹಾಮ್‌ಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪರ್ಲಖೇಮುಂಡಿಯಲ್ಲಿ ಸೋಮವಾರ ರಾರ‍ಯಲಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಭಯೋತ್ಪಾದಕರ ಪಟ್ಟಕಟ್ಟಿಹಿಂದುಗಳಿಗೆ ಅಪಮಾನ ಮಾಡಲು ಕಾಂಗ್ರೆಸ್‌ ಯತ್ನಿಸಿತ್ತು. ರಾಹುಲ್‌ ಬಾಬಾ ಅವರು ಹಿಂದು ಸಮುದಾಯವನ್ನು ಭಯೋತ್ಪಾದನೆ ಜತೆ ತಳಕು ಹಾಕಲು ಪ್ರಯತ್ನಿಸಿದ್ದರು. ವಿಶ್ವಾದ್ಯಂತ ಇರುವ ಹಿಂದುಗಳಿಗೆ ಅಪಮಾನ ಮಾಡುವ ಯತ್ನ ಅದಾಗಿತ್ತು ಎಂದು ಗುಡುಗಿದರು.

ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಸರ್ಕಾರ ದಾಳಿ ನಡೆಸಿದೆ. ಗಡಿಯಲ್ಲಿ ಪಾಕಿಸ್ತಾನ ಶಸ್ತ್ರಾಸ್ತ್ರ ಹಾಗೂ ಯೋಧರ ಜತೆ ಸಜ್ಜಾಗಿದ್ದರೂ ಭಾರತ ತಕ್ಕ ಶಾಸ್ತಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರದಲ್ಲಿ ಈ ದಾಳಿ ನಡೆದಿದೆ. ಮೌನಿಬಾಬಾ ಮನಮೋಹನಸಿಂಗ್‌ ಆಳ್ವಿಕೆಯಲ್ಲಿ ಅಲ್ಲ ಎಂದರು. ಒಡಿಶಾ ಮುಖ್ಯಮಂತ್ರಿ 19 ವರ್ಷವಾದರೂ ಒಡಿಯಾ ಭಾಷೆ ಕಲಿತಿಲ್ಲ. ವೇಗದ ಪ್ರಗತಿಗೆ ಈ ಬಾರಿ ಒಡಿಶಾಕ್ಕೆ ಯುವ ಮುಖ್ಯಮಂತ್ರಿ ಬೇಕಾಗಿದ್ದಾರೆ ಎಂದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ