ಹಾಸನ: ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು ಬಿಜೆಪಿಗೆ ಸೇರುವ ಗೊಂದಲಗಳಿಗೆ ತೆರೆ ಬಿದ್ದಿದ್ದು, ಇದೀಗ ಮಿಸ್ಡ್ ಕಾಲ್ ಕೊಡೋ ಮೂಲಕ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಕೊಂಡಿದ್ದಾರೆ. ಆದರೆ, ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಇನ್ನೂ ಗೊಂದಲಗಳಿದ್ದು, ಬಿಜೆಪಿ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.


ಹಾಸನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷ  ಸೇರಿದ ಮಂಜು ಅವರನ್ನು, ಪಕ್ಷದ ಧ್ವಜ ನೀಡೋ‌ ಮೂಲಕ ಪಕ್ಷಕ್ಕೆ ಶಾಸಕ ಪ್ರೀತಂ ಗೌಡ ಸ್ವಾಗತಿಸದರು. ಆದರೆ, ಮಂಜು ಪಕ್ಷ ಸೇರ್ಪಡೆಗೆ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಅದಿನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಮಂಜು ಪಕ್ಷ ಸೇರ್ಪಡೆಗೆ ತೀವ್ರ ವಿರೋಧಿಸಿದ್ದ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಈ ಸಂದರ್ಭದಲ್ಲಿ ಅನುಪಸ್ಥಿತರಿದ್ದರು.

'ಮಂಜು ಹಳಸಿದ ಅನ್ನವಿದ್ದಂತೆ,' ಎಂದು ಯೋಗಾ ರಮೇಶ್ ಟೀಕಿಸಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಹಾಸನ ಅಭ್ಯರ್ಥಿ ಎಂದು ಘೋಷಿಸಿದ್ದು, ಬಿಜೆಪಿಯಿಂದ ಅಭ್ಯರ್ಥಿಯನ್ನು ಅಖೈರುಗೊಳಿಸಬೇಕಾಗಿದೆ. 

ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ...

 

ಪಕ್ಷದ ಸಿದ್ದಾಂತ ಒಪ್ಪಿ ಬಿಜೆಪಿ ಸದಸ್ಯತ್ವ ಪಡೆದಿದ್ದೇನೆ. ನಾಳೆ‌ ಪತ್ರಿಕಾಗೋಷ್ಠಿ ನಡೆಸಿ ನಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರೋ‌ ದಿನ ನಿಗದಿಗೊಳಿಸುತ್ತೇನೆ. ಕಾಂಗ್ರೆಸ್‌ನ ನನ್ನ ಪ್ರಾಥಮಿಕ ಸದಸ್ಯತ್ವ‌ಕ್ಕೆ ರಾಜೀನಾಮೆ ನೀಡಿದ್ದೇನೆ
. ಶಾಸಕನಾಗಿ ಸಚಿವನಾಗಿ ಕೆಲಸ ಮಾಡಲು ಅವಕಾಶ ನೀಡಿದ ಕಾಂಗ್ರೆಸ್‌ಗೆ ಧನ್ಯವಾದ. ರಾಜ್ಯದಲ್ಲಿ ಒಂದು ಕುಟುಂಬವನ್ನ ಬಲಪಡಿಸಲು ಮೈತ್ರಿ ಬಳಕೆಯಾಗುತ್ತಿದೆ. ಆ ಕಾರಣದಿಂದ ನಾನು ಪಕ್ಷ ತೊರೆಯುತ್ತಿದ್ದೇನೆ. 
ಹಾಸನದಿಂದ ಬಿಜೆಪಿ ಟಿಕೆಟ್ ನೀಡೋ ವಿಚಾರವನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಟಿಕೆಟ್ ‌ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಪಕ್ಷದ ಜೊತೆಗಿದ್ದು ಕೆಲಸ ಮಾಡುತ್ತೇನೆ. 
- ಎ.ಮಂಜು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹಾಸನ ಮುಖಂಡ.


ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ.