Asianet Suvarna News Asianet Suvarna News

ಮತ್ತೆ ಸಮ್ಮಿಶ್ರ ಸರಕಾರದ ಗುಸುಗುಸು

ಲೋಕಸಭೆ ಚುನಾವಣೆಯ 5 ಹಂತದ ಮತದಾನ ಮುಕ್ತಾಯವಾಗಿದ್ದು, ಇನ್ನೆರಡು ಹಂತಗಳು ಬಾಕಿಯಿವೆ. ಫಲಿತಾಂಶಕ್ಕೆ ದಿನಗಣನೆಯೂ ಆರಂಭವಾಗಿ, ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಈ ಬಾರಿ ಅತಂತ್ರ ಫಲಿತಾಂಶ ಬರಬಹುದು, ಮೈತ್ರಿ ಸರ್ಕಾರ (ಬಿಜೆಪಿ ನೇತೃತ್ವದ ಎನ್‌ಡಿಎ ಅಥವಾ ಮಹಾಗಠಬಂಧನ) ಅನಿವಾರ್ಯವಾಗಬಹುದು ಎಂದು ಸಮೀಕ್ಷೆಗಳು ಭವಿಷ್ಯ ಹೇಳುತ್ತಿವೆ. 

Coalition government likely in center and its history in Indian democracy
Author
Bengaluru, First Published May 8, 2019, 12:07 PM IST

ನವದೆಹಲಿ (ಮೇ. 08): ಲೋಕಸಭೆ ಚುನಾವಣೆಯ 5 ಹಂತದ ಮತದಾನ ಮುಕ್ತಾಯವಾಗಿದ್ದು, ಇನ್ನೆರಡು ಹಂತಗಳು ಬಾಕಿಯಿವೆ. ಫಲಿತಾಂಶಕ್ಕೆ ದಿನಗಣನೆಯೂ ಆರಂಭವಾಗಿ, ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಈ ಬಾರಿ ಅತಂತ್ರ ಫಲಿತಾಂಶ ಬರಬಹುದು, ಮೈತ್ರಿ ಸರ್ಕಾರ (ಬಿಜೆಪಿ ನೇತೃತ್ವದ ಎನ್‌ಡಿಎ ಅಥವಾ ಮಹಾಗಠಬಂಧನ) ಅನಿವಾರ್ಯವಾಗಬಹುದು ಎಂದು ಸಮೀಕ್ಷೆಗಳು ಭವಿಷ್ಯ ಹೇಳುತ್ತಿವೆ.

ಸೋಷಿಯಲ್ ಮೀಡಿಯಾ ಹಿಂಬಾಲಕರು: ಮೋದಿ ಈಗ ವಿಶ್ವದಲ್ಲೇ ನಂ.2!

ಪ್ರಮುಖ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರೂ ಇದೇ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯದ ಸ್ಥಿತಿಗತಿ ಹಾಗೂ ಹಿಂದಿನ ಸಮ್ಮಿಶ್ರ ಸರ್ಕಾರಗಳ ಕುರಿತ ಮಾಹಿತಿ ಇಲ್ಲಿದೆ.

ಸಮ್ಮಿಶ್ರ ಸರ್ಕಾರ ಯಾವಾಗ ರಚನೆಯಾಗುತ್ತದೆ?

ಚುನಾವಣೆಯೊಂದರಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದೇ ಅತಂತ್ರ ಫಲಿತಾಂಶ ಬಂದಾಗ ಮತ್ತು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ರಾಜಕೀಯ ಪಕ್ಷವು ಬಹುಮತ ಸಾಬೀತುಪಡಿಸಲು ವಿಫಲವಾದಾಗ, ಎರಡು ಎಥವಾ ಹೆಚ್ಚು ಪಕ್ಷಗಳು ಒಗ್ಗೂಡಿ (ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಮೈತ್ರಿ) ಸರ್ಕಾರ ರಚಿಸುವುದೇ ಸಮ್ಮಿಶ್ರ ಸರ್ಕಾರ. ಬಹುಮತ ಬಾರದಿದ್ದರೂ ಅತಿ ಹೆಚ್ಚು ಕ್ಷೇತ್ರಗಳನ್ನು ಗೆದ್ದ ಪಕ್ಷವು ಅಧಿಕಾರಕ್ಕೆ ಏರಬಹುದು, ಆದರೆ ಲೋಕಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಾಗುತ್ತದೆ. ಆಗ ವಿರೋಧ ಪಕ್ಷಗಳು ಒಗ್ಗೂಡಿ ಸರ್ಕಾರ ರಚಿಸಲು ಮುಂದಾಗಿ ಅದನ್ನು ತಡೆಯಲೂ ಅವಕಾಶವಿರುತ್ತದೆ.

ಬಿಜೆಪಿಗೆ 280 ಸ್ಥಾನ, ಮಿತ್ರಪಕ್ಷಕ್ಕೇ ಅನುಮಾನ!

ಈಗೇಕೆ ಸಮ್ಮಿಶ್ರ ಸರ್ಕಾರದ ಪ್ರಶ್ನೆ?

ಅತ್ಯಂತ ಕುತೂಹಲಕಾರಿಯಾಗಿರುವ 2019ರ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟುಊಹೆಗಳು ಕೇಳಿಬರುತ್ತಿವೆ. ನರೇಂದ್ರ ಮೋದಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಗೆ ಕೆಲವು ಸೀಟುಗಳು ಕಡಿಮೆಯಾಗಬಹುದು, ಮಿತ್ರ ಪಕ್ಷಗಳು ಒಗ್ಗೂಡಿಯೇ ಸರ್ಕಾರ ರಚಿಸಬೇಕಾಗಬಹುದು ಎಂದು ಸ್ವತಃ ಬಿಜೆಪಿಯ ಹಿರಿಯ ನಾಯಕ ರಾಮ್‌ ಮಾಧವ್‌ ಅಭಿಪ್ರಾಯಪಟ್ಟಿದ್ದಾರೆ.

ಇನ್ನು 2014ರಂತೆ ಈಗ ಮೋದಿ ಅಲೆ ಇಲ್ಲ. ರಾಹುಲ್‌ ಗಾಂಧಿಯವರ ಜನಪ್ರಿಯತೆ ಹೆಚ್ಚಿದೆಯಾದರೂ ಮೋದಿ ಅವರನ್ನು ಸೋಲಿಸುವ ಸಾಮರ್ಥ್ಯ ಇನ್ನೂ ಅವರಿಗೆ ಬಂದಿಲ್ಲ. ಒಟ್ಟಾರೆ ಕಾಂಗ್ರೆಸ್‌ ಆಗಲೀ ಅಥವಾ ಬಿಜೆಪಿಯೇ ಆಗಲಿ ಸ್ಪಷ್ಟಬಹುಮತ ಪಡೆಯುವುದು ಕಷ್ಟಎಂದು ಅಂದಾಜಿಸಲಾಗುತ್ತಿದೆ. ಕಾರ್ವಿ ಇನ್‌ಸೈಟ್‌ ಮತ್ತು ಇಂಡಿಯಾ ಟುಡೇ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಬಿಜೆಪಿಗೆ ಅಂದಾಜು 245 ಸೀಟು ಸಿಗಬಹುದು. ಸರ್ಕಾರ ರಚನೆಗೆ ಕೆಲವು ಸೀಟುಗಳು ಕಡಿಮೆಯಾಗಬಹುದೆಂದು ಹೇಳಲಾಗಿದೆ.

ಎಬಿಪಿ ನ್ಯೂಸ್‌, ಸಿ-ವೋಟರ್‌ ಮತ್ತಿತರ ಸಂಸ್ಥೆಗಳು ನಡೆಸಿದ ಜನಾಭಿಪ್ರಾಯ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ಪಡೆಯಲು ಕೆಲವು ಸೀಟುಗಳು ಕಡಿಮೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ ಲೋಕಸಭಾ ಚುನಾವಣೆಯ ನಿರ್ಣಾಯಕ ರಾಜ್ಯ ಉತ್ತರ ಪ್ರದೇಶ. ಅಲ್ಲಿ ಈ ಬಾರಿ ಎಸ್‌ಪಿ ಹಾಗೂ ಬಿಎಸ್‌ಪಿ ಪಕ್ಷಗಳು ಒಂದಾಗಿರುವುದರಿಂದ ಬಿಜೆಪಿ ಕಳೆದ ಬಾರಿ ಕ್ಲೀನ್‌ ಸ್ವೀಪ್‌ ಮಾಡಿದಂತೆ ಈ ಸಲ ಮಾಡಲು ಸಾಧ್ಯವಿಲ್ಲ ಎಂಬ ಸ್ಥಿತಿಯಿದೆ. ಇನ್ನು, ಬಿಜೆಪಿಯೇತರ ಪಕ್ಷಗಳೂ ಮೈತ್ರಿ ಸರ್ಕಾರ ರಚನೆಯ ಕುರಿತೇ ಸುಳಿವು ನೀಡುತ್ತಿವೆ.

ವೈರಲ್‌ ಚೆಕ್‌ :ಬಿಜೆಪಿ ಅಧಿಕಾರಕ್ಕೆ ಬರದೇ ಹೋದರೆ ದೇಶಕ್ಕೆ ಬೆಂಕಿ ಅಂದ್ರಾ ಯೋಗಿ?

ಮಹಾಗಠಬಂಧನದ ಕತೆ ಏನಾಗಿದೆ?

ಬಿಜೆಪಿ ವಿರೋಧಿ ಪಕ್ಷಗಳ ಮಹಾಗಠಬಂಧನವು ಚುನಾವಣೆಗೂ ಮೊದಲು ಮಾಡುತ್ತಿದ್ದಷ್ಟುಸದ್ದು ಈಗ ಇಲ್ಲ. ಆದರೂ ಕೆಲವು ರಾಜ್ಯಗಳಲ್ಲಿ ಚುನಾವಣಾ ಪೂರ್ವ ಮೈತ್ರಿ ಇದೆ. ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಸದ್ಯ ಅಲ್ಲಿ ಈ ಮೈತ್ರಿಯಿಂದ ಕಾಂಗ್ರೆಸ್ಸನ್ನು ಹೊರಗಿಟ್ಟಿದ್ದರೂ ಪರೋಕ್ಷವಾಗಿ ಕಾಂಗ್ರೆಸ್‌ ಮಹಾಗಠಬಂದನಕ್ಕೆ ಸಹಾಯ ಮಾಡುತ್ತಿದೆ. ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸದಿರಲು ಅದೇ ಕಾರಣ ಎನ್ನಲಾಗುತ್ತಿದೆ.

ಇತ್ತ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಹಲವು ಬಿಜೆಪಿವಿರೋಧಿ ಪಕ್ಷಗಳು ಕೊಲ್ಕತ್ತಾದಲ್ಲಿ ಮೆಗಾ ರಾರ‍ಯಲಿ ಮಾಡಿ ಶಕ್ತಿ ಪ್ರದರ್ಶನ ಮಾಡಿವೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ.

ಈ ಮಹಾಗಠಬಂಧನಕ್ಕೆ ಸರ್ಕಾರ ರಚಿಸುವಷ್ಟುಸೀಟು ಬಾರದಿದ್ದರೂ ಬಿಜೆಪಿ ಸರ್ಕಾರ ರಚನೆಯಾಗಲು ಬಿಡಬಾರದು ಎಂಬ ಕಾರಣಕ್ಕೆ ಫಲಿತಾಂಶದ ನಂತರ ಇನ್ನಷ್ಟುಪಕ್ಷಗಳು ಮಹಾಗಠಬಂಧನದ ಜೊತೆ ಕೈಜೋಡಿಸಬಹುದು. ಕಾಂಗ್ರೆಸ್‌ ಪಕ್ಷ ತಕ್ಕಮಟ್ಟಿಗೆ ಸೀಟುಗಳನ್ನು ಗಳಿಸಿದರೆ ಈ ಹಿಂದೆ ಯುಪಿಎಯಲ್ಲಿದ್ದ ಪಕ್ಷಗಳು ಬೆಂಬಲ ನೀಡಿ ಸರ್ಕಾರ ರಚಿಸಲು ಯತ್ನಿಸಬಹುದು.

ಮೈತ್ರಿ ಸರ್ಕಾರಗಳು 5 ವರ್ಷ ಪೂರೈಸಿವೆಯೇ?

ಪೂರೈಸಿವೆ. ದೇಶದಲ್ಲಿ ಈ ಹಿಂದೆ ರಚನೆಯಾದ ಹಲವು ಸಮ್ಮಿಶ್ರ ಸರ್ಕಾರಗಳಲ್ಲಿ ಕೆಲವು 5 ವರ್ಷ ಅಧಿಕಾರ ನಡೆಸಿವೆ. ಮನಮೋಹನ ಸಿಂಗ್‌ ನೇತೃತ್ವದ ಯುಪಿಎ-1 ಮತ್ತು 2 ಸರ್ಕಾರ ಪೂರ್ಣವಾಗಿ 5 ವರ್ಷ ಅಧಿಕಾರದಲ್ಲಿತ್ತು. ಅದಕ್ಕೂ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸಿದೆ. ಅದಕ್ಕೂ ಮುಂಚೆ ಅಟಲ್‌ಜೀ ನೇತೃತ್ವದ ಎನ್‌ಡಿಎ ಸರ್ಕಾರ ಎರಡು ಬಾರಿ ಪೂರ್ಣಾವಧಿ ಪೂರೈಸದೆ ಪತನಗೊಂಡಿದೆ. ಎಚ್‌.ಡಿ.ದೇವೇಗೌಡ, ಐ.ಕೆ.ಗುಜ್ರಾಲ್‌ ನೇತೃತ್ವದ ಸಂಯುಕ್ತ ರಂಗ ಸರ್ಕಾರಗಳೂ ಅವಧಿ ಪೂರೈಸದೆ ಪತನಗೊಂಡಿವೆ.

ಮೈತ್ರಿ ಸರ್ಕಾರ ಹಗ್ಗದ ಮೇಲಿನ ನಡಿಗೆ

ಇತ್ತೀಚೆಗೆ ಮೋದಿ ಅವರು ಮಹಾಗಠಬಂಧನದ ವಿರುದ್ಧ ಮಾತನಾಡುತ್ತಾ, ‘ದೇಶದ ಜನರು ಮಜಬೂತ್‌ (ಬಲಶಾಲಿ) ಸರ್ಕಾರ ಬೇಕೋ ಅಥವಾ ಮಜ್‌ಬೂರ್‌ (ದುರ್ಬಲ) ಸರ್ಕಾರ ಬೇಕೋ ನಿರ್ಧಾರ ಮಾಡುತ್ತಾರೆ’ ಎಂದು ವಾಗ್ದಾಳಿ ನಡೆಸಿದ್ದರು. ಸಮ್ಮಿಶ್ರ ಸರ್ಕಾರಗಳಲ್ಲಿ ಹಲವಾರು ರಾಜಕೀಯ ಪಕ್ಷಗಳಿರುವುದರಿಂದ ಸಾಮಾನ್ಯವಾಗಿ ಅವು ದುರ್ಬಲವಾಗಿರುತ್ತವೆ ಎಂಬ ನಂಬಿಕೆಯಿದೆ. ಇದಕ್ಕೆ ಉದಾಹರಣೆಗಳೂ ಇವೆ. ಆದರೆ ಮೈತ್ರಿ ಸರ್ಕಾರಗಳೆಲ್ಲವೂ ದುರ್ಬಲ ಸರ್ಕಾರಗಳಲ್ಲ ಎಂಬುದಕ್ಕೂ ಉದಾಹರಣೆಗಳಿವೆ.

ಮಂಡಲ್‌ ಆಯೋಗದ ಅನುಷ್ಠಾನ, ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ, ಪೋಖ್ರಾಣ್‌ನಲ್ಲಿ ಪರಮಾಣು ಪರೀಕ್ಷೆ, ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ ಜಾರಿ ಮುಂತಾದ ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡ ಸರ್ಕಾರಗಳು ಮೈತ್ರಿ ಸರ್ಕಾರಗಳೇ ಆಗಿದ್ದವು. ಮೈತ್ರಿ ಸರ್ಕಾರಗಳಲ್ಲಿ ಏಕವ್ಯಕ್ತಿಯ ನಿರ್ಧಾರಗಳಿಗಿಂತ ಗುಂಪು ನಿರ್ಧಾರ ಪ್ರಾಮುಖ್ಯತೆ ಪಡೆದಿರುತ್ತವೆ. ಒಟ್ಟಿನಲ್ಲಿ ಇಂತಹ ಸರ್ಕಾರವನ್ನು ಮುನ್ನಡೆಸುವುದು ಹಗ್ಗದ ಮೇಲಿನ ನಡಿಗೆಯಂತೂ ಹೌದು.

ಮೋದಿ ಸರ್ಕಾರವೂ ಮೈತ್ರಿ ಸರ್ಕಾರವೇ

2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೂ ಮೈತ್ರಿ ಸರ್ಕಾರವೇ. ಆದರೆ ಮೈತ್ರಿ ಪಕ್ಷಗಳ ನೇತಾರನಾದ ಬಿಜೆಪಿಗೆ ಏಕಾಂಗಿಯಾಗಿ 282 (ಬಹುಮತಕ್ಕೆ ಬೇಕಾದ್ದಕ್ಕಿಂತ ಹೆಚ್ಚು) ಸೀಟು ಲಭಿಸಿರುವುದರಿಂದ ಇದು ಮೈತ್ರಿ ಸರ್ಕಾರವೆಂಬ ಭಾವನೆ ಬಾರದಂತೆ ಸರ್ಕಾರ 5 ವರ್ಷ ಪೂರೈಸಿದೆ.

ಈ ಹಿಂದಿನ ಸಮ್ಮಿಶ್ರ ಸರ್ಕಾರಗಳು

ಭಾರತದಲ್ಲಿ ನೂರಾರು ರಾಜಕೀಯ ಪಕ್ಷಗಳಿವೆ. ಹಾಗಾಗಿ ಒಂದೇ ಪಕ್ಷಕ್ಕೆ ಸ್ಪಷ್ಟಬಹುಮತ ಬರದೆ 1977-2014ರ ವರೆಗೆ ಹಲವು ಮೈತ್ರಿ ಸರ್ಕಾರಗಳು ರಚನೆಯಾದ ಉದಾಹರಣೆಗಳಿವೆ. ಸ್ವಾತಂತ್ರ್ಯಾನಂತರ ಇಂದಿರಾ ಗಾಂಧಿ 1975ರಲ್ಲಿ ತುರ್ತುಸ್ಥಿತಿ ಘೋಷಿಸುವವರೆಗೂ ದೇಶವನ್ನು ಕಾಂಗ್ರೆಸ್‌ ಪಕ್ಷವೇ ಏಕಾಂಗಿಯಾಗಿ ಆಳಿತ್ತು. ನಂತರ 1977ರಲ್ಲಿ ಸಮ್ಮಿಶ್ರ ಸರ್ಕಾರದ ಯುಗ ಆರಂಭವಾಯಿತು.

ಮೊರಾರ್ಜಿ ದೇಸಾಯಿ (ಮಾ.1977-ಜೂ.1979)

857 ದಿನ ಅಧಿಕಾರ

ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯ ಬಳಿಕ ರಚನೆಯಾದ ಮೊಟ್ಟಮೊದಲ ಮೈತ್ರಿ ಸರ್ಕಾರ ಇದು. ಜನತಾ ಪಕ್ಷ ಚುನಾವಣೆಯಲ್ಲಿ ಗೆದ್ದಿತ್ತು. ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಂದಹಾಗೆ ಇದು ಸ್ವತಂತ್ರ ಭಾರತದ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರ್ಕಾರ. ಆದರೆ ಹಲವಾರು ಪಕ್ಷಗಳ ಮೈತ್ರಿಯೊಂದಿಗೆ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. 1979ರಲ್ಲಿ ಮಿತ್ರ ಪಕ್ಷಗಳು ಮೈತ್ರಿ ತೊರೆದ ಕಾರಣ ಕಾರಣ ಸರ್ಕಾರ ಉರುಳಿ ಬಿತ್ತು. ದೇಸಾಯಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.

ಚರಣ್‌ ಸಿಂಗ್‌ (1979-ಜನವರಿ 1980)

171 ದಿನ ಆಡಳಿತ

ಮೊರಾರ್ಜಿ ದೇಸಾಯಿ ಸರ್ಕಾರ ಉರುಳಿದ ಬಳಿಕ ಭಾರತೀಯ ಲೋಕದಳ ನಾಯಕ ಚರಣ್‌ ಸಿಂಗ್‌ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದೆ ಕೇವಲ 171 ದಿನದಲ್ಲಿ ಸರ್ಕಾರ ಉರುಳಿತು. ಮತ್ತೊಮ್ಮೆ ಚುನಾವಣೆ ಘೋಷಣೆಯಾಯಿತು.

ವಿ ಪಿ ಸಿಂಗ್‌ (ಡಿಸೆಂಬರ್‌ 1989- ನವೆಂಬರ್‌ 1990)

344 ದಿನ ಆಡಳಿತ

1989ರ ಚುನಾವಣೆ ನಂತರ ಜನತಾದಳ, ಬಿಜೆಪಿ ಮತ್ತು ಸ್ಥಳೀಯ ಪಕ್ಷಗಳ ಸಹಾಯದ ಮೇರೆಗೆ ನ್ಯಾಷನಲ್‌ ಫ್ರಂಟ್‌ ಸರ್ಕಾರವನ್ನು ರಚಿಸಿತು. ವಿ ಪಿ ಸಿಂಗ್‌ ಪ್ರಧಾನಿಯಾಗಿದ್ದರು. ಆದರೆ ಚಂದ್ರಶೇಖರ್‌ ಮೈತ್ರಿಯಿಂದ ಹೊರನಡೆದ ಬಳಿಕ ಸರ್ಕಾರ ಉರುಳಿ ಬಿತ್ತು.

ಚಂದ್ರಶೇಖರ್‌ (ನ.1990-ಜೂ.1991)

224 ದಿನ ಅಧಿಕಾರ

1990ರಲ್ಲಿ ಚಂದ್ರಶೇಖರ್‌ ಅವರು ಕಾಂಗ್ರೆಸ್‌ ಸಹಾಯದೊಂದಿಗೆ ಅಧಿಕಾರಕ್ಕೇರಿದರು. ಕೆಲವೇ ತಿಂಗಳಲ್ಲಿ ಸರ್ಕಾರ ಉರುಳಿಬಿತ್ತು. ಸಾರ್ವತ್ರಿಕ ಚುನಾವಣೆ ಘೋಷಣೆಯಾಯಿತು.

ಎಚ್‌.ಡಿ.ದೇವೇಗೌಡರ (1996-1997)

325 ದಿನ ಆಡಳಿತ

ವಾಜಪೇಯಿ ಸರ್ಕಾರ ಬಿದ್ದ ನಂತರ ಸ್ಥಳೀಯ ಪಕ್ಷಗಳು ಮತ್ತು ಕಾಂಗ್ರೆಸ್‌ ಬೆಂಬಲದೊಂದಿಗೆ ಎಚ್‌.ಡಿ ದೇವೇಗೌಡ ಪ್ರಧಾನಿಯಾದರು. ಆದರೆ ಒಂದು ವರ್ಷದೊಳಗೇ ಕಾಂಗ್ರೆಸ್‌ ತನ್ನ ಬೆಂಬಲವನ್ನು ಹಿಂಪಡೆಯಿತು. 11ನೇ ತಿಂಗಳಿಗೇ ದೇವೇಗೌಡ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.

ಐ ಕೆ ಗುಜ್ರಾಲ್‌ (1997-1998)

332 ದಿನ ಅಧಿಕಾರ

ದೇವೇಗೌಡರು ರಾಜೀನಾಮೆ ನೀಡಿದ ಬಳಿಕ ಐ ಕೆ ಗುಜ್ರಾಲ್‌ ಪ್ರಧಾನಿ ಹುದ್ದೆಗೇರಿದರು. ಕಾಂಗ್ರೆಸ್‌ ಮತ್ತೊಮ್ಮೆ ಯುನೈಟೆಡ್‌ ಫ್ರಂಟ್‌ ಸರ್ಕಾರಕ್ಕೆ ಬೆಂಬಲ ನೀಡಿತ್ತು. ನಂತರ ಮತ್ತೆ ಬೆಂಬಲ ಹಿಂಪಡೆಯಿತು. ಸರ್ಕಾರ ಉರುಳಿ ಬಿತ್ತು.

ಅಟಲ್‌ ಬಿಹಾರಿ ವಾಜಪೇಯಿ (3 ಬಾರಿ)

ವಾಜಪೇಯಿ ಅವರು ಮೂರು ಬಾರಿ ಸಮ್ಮಿಶ್ರ ಸರ್ಕಾರ ರಚಿಸಿ ಪ್ರಧಾನಿಯಾಗಿದ್ದರು. 1996ರಲ್ಲಿ ಮೊದಲ ಬಾರಿ ಸರ್ಕಾರ ರಚಿಸಿದಾಗ ಅದು 13 ದಿನಕ್ಕೆ ಪತನಗೊಂಡಿತ್ತು. ನಂತರ 1998ರ ಚುನಾವಣೆಯಲ್ಲಿ ಬಿಜೆಪಿ 182 ಸೀಟು ಗೆದ್ದಾಗ ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌ ಸ್ಥಾಪಿಸಿ ವಾಜಪೇಯಿ ಮತ್ತೊಮ್ಮೆ ಪ್ರಾದೇಶಿಕ ಪಕ್ಷಗಳ ಸಹಕಾರದೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ಕೇವಲ 13 ತಿಂಗಳಲ್ಲಿ ಎಐಎಡಿಎಂಕೆ ಬೆಂಬಲ ವಾಪಸ್‌ ಪಡೆಯಿತು. ಸರ್ಕಾರ ಪತನಗೊಂಡಿತು. 1999ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ 182 ಸೀಟು ಗಳಿಸಿದಾಗ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಗಿ ವಾಜಪೇಯಿ ಪ್ರಧಾನಿಯಾದರು. ಆ ಸರ್ಕಾರ 5 ವರ್ಷ ಪೂರೈಸಿತು.

ಮನಮೋಹನ ಸಿಂಗ್‌ (2 ಬಾರಿ)

ಸಮ್ಮಿಶ್ರ ಸರ್ಕಾರವನ್ನು ಅತಿಹೆಚ್ಚು ಅವಧಿಗೆ ಮುನ್ನಡೆಸಿದ ಖ್ಯಾತಿ ಮನಮೋಹನ ಸಿಂಗ್‌ ಅವರದು. 2004ರಲ್ಲಿ ಕಾಂಗ್ರೆಸ್‌ 145 ಸೀಟು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗ ಕಾಂಗ್ರೆಸ್‌ ಪಕ್ಷ ಯುನೈಟೆಡ್‌ ಪ್ರೊಗ್ರೆಸ್ಸಿವ್‌ ಅಲಯನ್ಸ್‌ (ಯುಪಿಎ) ಸ್ಥಾಪಿಸಿ ಪ್ರಾದೇಶಿಕ ಪಕ್ಷಗಳ ಸಹಾಯದೊಂದಿಗೆ ಸರ್ಕಾರ ರಚಿಸಿತು. ಮನಮೋಹನ ಸಿಂಗ್‌ 5 ವರ್ಷ ಅಧಿಕಾರ ನಡೆಸಿದರು. ನಂತರ 2009ರ ಚುನಾವಣೆಯಲ್ಲೂ ಮತ್ತೆ ಯುಪಿಎ ಅಧಿಕಾರಕ್ಕೆ ಬಂತು. ಮನಮೋಹನ ಸಿಂಗ್‌ ಎರಡನೇ ಬಾರಿ ಪ್ರಧಾನಿಯಾಗಿ ಪೂರ್ಣಾವಧಿ ಅಧಿಕಾರದಲ್ಲಿದ್ದರು.

- ಕೀರ್ತಿ ತೀರ್ಥಹಳ್ಳಿ 

Follow Us:
Download App:
  • android
  • ios