ನವದೆಹಲಿ[ಮೇ.08]: ಸಾಮಾಜಿಕ ಜಾಲತಾಣಗಳಲ್ಲಿ 11 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೊದಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಎರಡನೇ ರಾಜಕೀಯ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವೀಟರ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಮೋದಿ 11,09,12,648 ಹಿಂಬಾಲಕರನ್ನು ಸಂಪಾದಿಸಿದ್ದಾರೆ ಎಂದು ಆನ್‌ಲೈನ್‌ ಮಾಹಿತಿ ವಿಶ್ಲೇಷಣಾ ವೇದಿಕೆ ಸೆಮರುಷ್‌ ಡಾಟ್‌ ಕಾಮ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ.

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ 18 ಕೋಟಿ ಹಿಂಬಾಲಕರೊಂದಿಗೆ ಜಾಗತಿಕವಾಗಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಾಯಕ ಎನಿಸಿಕೊಂಡಿದ್ದಾರೆ. 11 ಕೋಟಿಗೂ ಅಧಿಕ ಹಿಂಬಾಲಕರನ್ನು ಸಂಪಾದಿಸಿರುವ ನರೇಂದ್ರ ಮೋದಿ, 9.6 ಕೋಟಿ ಹಿಂಬಾಲಕರನ್ನು ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನೂ ಹಿಂದಿಕ್ಕಿದ್ದಾರೆ.

ಆದರೆ, ಟ್ರಂಪ್‌ ಅವರು ಟ್ವೀಟರ್‌ನಲ್ಲಿ ಎರಡನೇ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕಾರಣಿ ಎನಿಸಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಟ್ವೀಟರ್‌ನಲ್ಲಿ 1.2 ಕೋಟಿ ಹಿಂಬಾಲಕರನ್ನು ಸಂಪಾದಿಸಿದ್ದಾರೆ. ಉಳಿದ ಎಲ್ಲಾ ಸಾಮಾಜಿಕ ಜಾಲತಾಣ ವೇದಿಕೆಗಳಿಗಿಂತ ಟ್ವೀಟರ್‌ ಅತಿ ಹೆಚ್ಚಿನ ಸಂಖ್ಯೆ ಸಕ್ರಿಯ ರಾಜಕೀಯ ಪ್ರೇಕ್ಷಕರನ್ನು ಹೊಂದಿದೆ ಎಂದು ಸೆಮರುಷ್‌ನ ವರದಿ ತಿಳಿಸಿದೆ.