ಅಜ್ಮೀರ್[ಏ.12]: ಬಿಜೆಪಿ ಕಾರ್ಯಕರ್ತರ ನಡುವೆ ಬಿನ್ನಾಭಿಪ್ರಾಯ ಭುಗಿಲೆದ್ದಿದ್ದು, ಮಾತಿಗೆ ಮಾತು ಬೆಳೆದು ಕೊನೆಗೆ ಪರಸ್ಪರ ಹೊಡೆದಾಡಿಕೊಂಡ ರಾಜಸ್ಥಾನದಲ್ಲಿ ನಡೆದಿದೆ. ಸದ್ಯ ದೇಶದ ಅತಿದೊಡ್ಡ ರಾಜಕೀಯ ಪಕ್ಷದ ಕಾರ್ಯಕರ್ತರು ಪರಸ್ಪರ ಕೈ ಮಿಲಾಯಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಜಸ್ಥಾನದ ಅಜ್ಮೀರ್ ನ ಮಸೂದಾದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ಭಾಗರಥ್ ಚೌಧರಿ, ಮಾಜಿ ಶಾಸಕಿಯ ಗಂಡ ಭಂವರ್ ಸಿಂಗ್ ಹಾಗೂ ಪಲಾಡಾ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿರುವ ನವೀನ್ ಶರ್ಮಾ ಒಂದೇ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಇವರ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿವಾದ ಏನು? ಹಾಗೂ ಹೊಡೆದಾಡಿಕೊಳ್ಳಲು ಕಾರಣವೇನು? ಎಂಬುವುದು ಸ್ಪಷ್ಟವಾಗಿಲ್ಲ. ಆದರೆ ಕಾರ್ಯಕ್ರಮದಲ್ಲಿ ನಮ್ಮ ನಾಯಕರೇ ಮೊದಲು ಭಾಷಣ ಮಾಡಬೇಕು ಎಂಬ ವಿಚಾರವಾಗಿ ಜಗಳವಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿವಾದಿಂದ ಕೋಪಗೊಂಡ ಭಗೀರಥ್ ಕೂಡಲೇ ಅಲ್ಲಿಂದ ತೆರಳಿದ್ದಾರೆ. ಸದ್ಯ ಬಿಜೆಪಿ ಜಿಲ್ಲಾಧ್ಯಕ್ಷ ಈ ಕುರಿತು ತನಿಖೆ ಆರಂಭಿಸಿದ್ದಾರೆ.

ಈ ಹೊಡೆದಾಟದ ನಡುವೆ ಕೆಲ ಬಿಜೆಪಿ ನಾಯಕರು ಪರಿಸ್ಥಿತಿ ಶಾಂತರಗೊಳಿಸಲು ಯತ್ನಿಸಿದ್ದಾರೆ. ಇನ್ನು ಈ ಹೈಡ್ರಾಮಾದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನೂ ಸ್ಥಗಿತಗೊಳಿಸಲಾಗಿದೆ. 

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.