ಕೋರಾರ್(ಏ.17): ರಾಜಕಾರಣಿಗಳ ಎಲುಬಿಲ್ಲದ ನಾಲಿಗೆಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಸತತ ಪ್ರಯತ್ನ ನಡೆಸುತ್ತಲೇ ಇದೆ. ಆದರೂ ಮತ ಗಳಿಕೆಗಾಗಿ ನಮ್ಮ ರಾಜಕಾರಣಿಗಳು ತಲೆ ಬುಡವಿಲ್ಲದ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ಬಿಜೆಪಿ ಹೊರತುಪಡಿಸಿ ಮತ್ತೊಂದು ಪಕ್ಷಕ್ಕೆ ಮತ ಹಾಕಿದರೆ ಮೋದಿಗೆ ಗೊತ್ತಾಗಲಿದೆ..’ ಎಂದು ನಿನ್ನಯಷ್ಟೇ ಗುಜರಾತ್ ಬಿಜೆಪಿ ಶಾಸಕರೊಬ್ಬರು ಫರ್ಮಾನು ಹೊರಡಿಸಿದ್ದರು.

ಇದೀಗ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಛತ್ತೀಸ್‌ಗಡ್ ಕಾಂಗ್ರೆಸ್ ಸಚಿವ, ಬ್ಯಾಲೆಟ್ ಪೇಪರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮೊದಲ ಅಂಕಿ ನೀಡಲಾಗಿದ್ದು ಅದನ್ನು ಬಿಟ್ಟು ಬೇರೆ ಯಾವುದೇ ಬಟನ್ ಒತ್ತಿದರೂ ಮತದಾರನಿಗೆ ಎಲೆಕ್ಟ್ರಿಕ್ ಶಾಕ್ ಹೊಡೆಯಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಬಿರೇಶ್ ಠಾಕೂರ್ ಪರ ಮತಯಾಚಿಸಿದ ಕಾಂಗ್ರೆಸ್ ಸಚಿವ ಕವಾಸಿ ಲಕ್ಮಾ , ಒಂದನೇ ಬಟನ್ ಹೊರತುಪಡಿಸಿ ಬೇರೆ ಯಾವುದೇ ಬಟನ್ ಒತ್ತಿದರೂ ಇವಿಎಂ ಯಂತ್ರದ ಮೂಲಕ ಮತದಾರನಿಗೆ ಎಲೆಕ್ಟ್ರಿಕ್ ಶಾಕ್ ಹೊಡೆಯಲಿದೆ ಎಂದು ಹೇಳಿದ್ದಾರೆ.

ಇನ್ನು ಕವಾಸಿ ಲಕ್ಮಾ ಹೇಳಿಕೆಗೆ ಸ್ಪಷ್ಟೀಕರಣ ಕೋರಿ ಚುನಾವಣಾ ಆಯೋಗ ಸಚಿವರಿಗೆ ನೋಟಿಸ್ ಜಾರಿ ಮಾಡಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.