ಅಹಮದಾಬಾದ್(ಏ.16): ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಕ್ಯಾಮರಾ ಅಳವಡಿಸಿದ್ದು, ನಿವು ಕಾಂಗ್ರೆಸ್‌ಗೆ ಮತ ನೀಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಗುಜರಾತ್ ಬಿಜೆಪಿ ಶಾಸಕ ರಮೇಶ್ ಕಟಾರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಇಲ್ಲಿನ ಫತೇಪೂರ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಕಟಾರಾ, ಪ್ರಧಾನಿ ಮೋದಿ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ದಾವೋದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಸ್ವಂತ್ ಬಾಬೋರ್ ಪರ ಮತಯಾಚನೆ ಮಾಡಿದ ಕಟಾರಾ, ಮತಗಟ್ಟೆಯಲ್ಲಿ ನೀವು ಕಮಲದ ಬದಲು ಕೈ ಚಿಹ್ನೆಯ ಬಟನ್ ಒತ್ತಿದರೆ ಪ್ರಧಾನಿ ಮೋದಿಗೆ ಅದರ ಕುರಿತು ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಇನ್ನು ರಮೇಶ್ ಕಟಾರಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಮೋದಿ ಸರ್ವಾಧಿಕಾರಿ ಆಡಳಿತದ ವೈಖರಿಗೆ ರಮೇಶ್ ಕಟಾರಾ ಹೇಳಿಕೆ ಕನ್ನಡಿ ಹಿಡಿದಂತಿದೆ ಎಂದು ಹರಿಹಾಯ್ದಿದೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.