ಗದಗ[ಏ.12]: ಲೋಕಸಭಾ ಚುನಾವಣಾ ಪ್ರಚಾರ ಭರಾಟೆ ಜೋರಾಗಿದೆ. ರಾಜ್ಯದಲ್ಲೂ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದು, ರಾಜಕೀಯ ಮುಖಂಡರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಗದಗ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ಯಡಿಯೂರಪ್ಪ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ವಿರುದ್ಧ ಕಿಡಿ ಕಾರಿರುವ ಬಿಎಸ್ ವೈ 'ಕುಮಾರಸ್ವಾಮಿ ಎರಡು ಮೂರು ತಪ್ಪುಗಳನ್ನು ಮಾಡುತ್ತಿದ್ದಾರೆ. ಮೊದಲನೆಯದ್ದು ಮಾಧ್ಯಮದವರ ವಿರುದ್ಧ ತಿರುಗಿ ಬಿದ್ದು ಹಗರುವಾಗಿ ಮಾತನಾಡಿ, ನಿಮ್ಮ ಮೇಲೆ ಹಲ್ಲೆಯಾದರೆ ನಾನು ಜವಾಬ್ದಾರಿ ಅಲ್ಲ ಎಂದಿದ್ದಾರೆ. ಎರಡನೆಯದ್ದಾಗಿ ಪುಲ್ವಾಮಾ ದಾಳಿ 2 ವರ್ಷದ ಮುಂಚೆಯೇ ಗೊತ್ತಿತ್ತು ಎಂದಿದ್ದಾರೆ ಹಾಗೂ ಮೂರನೆಯದ್ದಾಗಿ ಐಟಿ ರೇಡ್ ವಿಚಾರವಾಗಿ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದು' ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪ್ರಸ್ತಾಪಿಸಿದ ಬಿ. ಎಸ್. ಯಡಿಯೂರಪ್ಪ 'ಮಂಡ್ಯದಲ್ಲಿ ಸುಮಲತಾ ಗೆಲ್ಲುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಡೆಸ್ಪರೇಟ್ ಆಗಿ ಹುಚ್ಚುಚ್ಚಾಗಿ ಮಾತನಾಡುತ್ತಾರೆ. ಗೂಂಡಾಗಿರಿ ನಡೆಸುತ್ತಿದ್ದಾರೆ. ಫಲಿತಾಂಶ ಬರುವರೆಗೂ ಇವರ ಗೂಂಡಾಗಿರಿ ನಡೆಯುತ್ತೆ ಫಲಿತಾಂಶದ ನಂತರ ಸರ್ಕಾರವೇ ಉಳಿಯುವುದಿಲ್ಲ' ಎಂದಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.