'ಗೃಹ ಸಚಿವ ಎಂಬಿ ಪಾಟೀಲ್ ಹುಚ್ಚಾಸ್ಪತ್ರೆಗೆ ದಾಖಲಾಗಲಿ'
ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೇಳಿಕೆಗಳು, ಆರೋಪಗಳ ಸುರಿಮಳೆ ಆಗುತ್ತಿದೆ. ಗೃಹ ಸಚಿವ ಎಂ.ಬಿ.ಪಾಟೀಲರ ವಿರುದ್ಧ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ವಾಗ್ದಾಳಿ ಮಾಡಿದ್ದಾರೆ.
ವಿಜಯಪುರ(ಏ. 15) ಗೃಹ ಸಚಿವ ಎಂ. ಬಿ. ಪಾಟೀಲ ಮಾನಸಿಕ ಅಸ್ವಸ್ಥ ಎಂದು ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಟೀಕಿಸಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಮಾತನಾಡಿದ ಶಾಸಕ, ನಡಹಳ್ಳಿ ಅರೆಹುಚ್ಚ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ನೀಡಿದ್ದ ಹೇಳಿಕೆಯನ್ನು ತಮ್ಮದೆ ದಾಟಿಯಲ್ಲಿ ಟೀಕಿಸಿದರು.
ಗೃಹಸಚಿವ ಎಂ.ಬಿ.ಪಾಟೀಲ ಮಾನಸಿಕ ಅಸ್ವಸ್ಥರಾಗಿದ್ದಾರೆ. ನನ್ನನ್ನು ಅರೆಹುಚ್ಚ ಎನ್ನುತ್ತಿರುವ ರಾಜ್ಯದ ಗೃಹ ಸಚಿವ ಎಂ.ಬಿ.ಪಾಟೀಲರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಈ ರಾಜ್ಯದ ಗೃಹಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಕೂಡಲೇ ಅವರು ಹುಚ್ಚಾಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡದರು.#
‘ಡಿಕೆಶಿ-ಎಂ.ಬಿ. ಪಾಟೀಲ್ ಬೀದಿ ಕುಡುಕರು'
ಚಿಕಿತ್ಸೆ ಮುಗಿಯವವರೆಗೂ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಬಾರದು. ನನ್ನ ಯೋಗ್ಯತೆ ಏನು ಎಂಬುದು ಜಿಲ್ಲೆಯ ಜನತೆಗೆ ಗೊತ್ತಿದೆ. ನಿಮ್ಮ ಹೇಳಿಕೆಯೇ ನಿಮ್ಮ ಯೋಗ್ಯತೆ ಏನು ಎಂಬುದನ್ನು ತೋರಿಸಿಕೊಡುತ್ತದೆ. ನಾನು 3 ಬಾರಿ ಸ್ವಸಾಮರ್ಥ್ಯದ ಮೇಲೆ ಶಾಸಕನಾಗಿ ಆಯ್ಕೆ ಆಗಿದ್ದೇನೆ ಆದರೆ ನೀವು ಅಪ್ಪ ನೆಟ್ಟ ರಾಜಕೀಯ ಆಲದ ಮರದ ಆಶ್ರಯದಲ್ಲಿ ಶಾಸಕರಾಗಿ ಮಂತ್ರಿಯಾಗಿ ಕೆಲಸ ಮಾಡಿದ್ದೀರಿ . ನಿಮ್ಮ ಸ್ವಂತ ಶಕ್ತಿಯ ಮೇಲೆ ನೀವು ಆಯ್ಕೆ ಆಗಿಲ್ಲ ಕಳೆದ ಚುನಾವಣೆಯಲ್ಲಿ ತಾವು ಗೆದ್ದಿರುವ ರೀತಿಯೇ ಸಂಶಯಾಸ್ಪದವಾಗಿದೆ ಎಂದು ಆರೋಪಿಸಿದರು.
ಇದಕ್ಕೆ ನಿಮ್ಮ ಎದುರು ಬಬಲೇಶ್ವರ ಮತಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನಮ್ಮ ಪಕ್ಷದ ಮುಖಂಡ ವಿಜುಗೌಡ ಪಾಟೀಲರೇ ಸಾಕ್ಷಿ. ನಿಮ್ಮ ಕ್ಷೇತ್ರದಲ್ಲಿ ಇವಿಎಂ ಯಂತ್ರಗಳು ಸಿಕ್ಕಿದ್ದು ಉದಾಹರಣೆ. ನಿಮ್ಮ ಯೋಗ್ಯತೆ ಏನು ಎನ್ನುವುದು ವಿಜಯಪುರ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೇ ಗೊತ್ತಿದೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಗೃಹಮಂತ್ರಿಯಾಗಿ ಹಿಂಬಾಲಕರನ್ನು ಛೂ ಬಿಟ್ಟು ವಿಪಕ್ಷದ ಶಾಸಕರೊಬ್ಬರ ಮೇಲೆ ದಾಂಧಲೆ ನಡೆಸೋದು ನಿಮ್ಮಂಥವರಿಗೆ ಮಾತ್ರ ಸರಿಯಾಗಿ ಹೊಂದಿಕೆ ಆಗುವಂಥದ್ದು ಎಂದು ನೇರವಾಗಿ ಎಂ.ಬಿ.ಪಾಟೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.