ಕಲಬುರಗಿ :  ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬೇನಾಮಿ ಹೆಸರಿನಲ್ಲಿ ಭಾರಿ ಆಸ್ತಿ ಮಾಡಿಕೊಂಡಿದ್ದು ಈ ಬಗ್ಗೆ ತನಿಖೆ ನಡೆಯಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆಗ್ರಹಿಸಿದ್ದಾರೆ. 

ಕಲ್ಬುರ್ಗಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ ನಂತರ ಮಾತನಾಡಿದ ಅವರು,  ಹೈದ್ರಾಬಾದ್ ಕರ್ನಾಟಕ ಹಿಂದುಳಿಯಲು ಮಲ್ಲಿಕಾರ್ಜುನ ಖರ್ಗೆ ಅವರೇ ನೇರ ಹೊಣೆ ಎಂದು ಆರೋಪಿಸಿದರು. 

ಅವರಿಗೆ ಈ ಭಾಗದ ಅಭಿವೃದ್ಧಿಗಿಂತ ಸ್ವಂತ ಅಭಿವೃದ್ಧಿಯೆ ಮುಖ್ಯವಾಗಿದೆ. ಅವರು ತಂದೆ ಮಕ್ಕಳ ಅಭಿವೃದ್ಧಿ ಮಾತ್ರ ನೋಡಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಲಿದ್ದಾರೆ ಎಂದರು. 

ಅವರ ಅಕ್ರಮ ಆಸ್ತಿ ಹೊರಗೆ ಬಾರದಂತೆ ತಂತ್ರ ಮಾಡುತ್ತಿದ್ದಾರೆ. ಆಸ್ತಿ ಜಾಸ್ತಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಿಂತ ನೆಲವೇ ಕುಸಿಯುತ್ತಿದೆ. ಈ ಬಾರಿ ಅವರೊಂದಿಗೆ ನಾಲ್ಕು ಜನ ನಾಯಕರೂ ಇಲ್ಲ. ಈ ಬಾರಿ ಮಲ್ಲಿಕಾರ್ಜುನ ಖರ್ಗೆ  ಸೋಲು ನಿಶ್ಚಯ ಎಂದರು. 

ಮಾಜಿ ಸಚಿವ ಡಾ. ಎ ಬಿ ಮಾಲಕರೆಡ್ಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಆಗುತ್ತಿರುವುದರಿಂದ ನಮಗೆ ಈ ಭಾಗದಲ್ಲಿ ಆನೆಬಲ ಬಂದಂತಾಗಿದೆ. ನಮ್ಮ ಅಭ್ಯರ್ಥಿ ಉಮೇಶ್ ಜಾದವ್ ಗೆಲುವಿಗೆ ಇದು ಇನ್ನಷ್ಟು ಸಹಕಾರಿಯಾಗಲಿದೆ ಎಂದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ