ಬಿಜೆಪಿ ಅಭ್ಯರ್ಥಿ ಡಿವಿಎಸ್ ನಾಮಪತ್ರ ಸಲ್ಲಿಕೆ| ಉತ್ತರ ಕ್ಷೇತ್ರದಿಂದ ಉಮೇದುವಾರಿಕೆ| ದೇಗುಲದಲ್ಲಿ ವಿಶೇಷ ಪೂಜೆ, ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ| ಬಿಜೆಪಿ ಮುಖಂಡರ ಸಾಥ್
ಬೆಂಗಳೂರು[ಮಾ.26]: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತೆರಳಿ ಸೋಮವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರಿಕೆ ಸಲ್ಲಿಕೆಗೂ ಮುನ್ನ ಮೈಸೂರು ಬ್ಯಾಂಕ್ ವೃತ್ತದ ಬಳಿ ಇರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಪತ್ನಿ ಡಾಟಿ ಅವರೊಂದಿಗೆ ವಿಶೇಷ ಪೂಜೆ ನೇರವೇರಿಸಿದರು. ಮೆರವಣಿಗೆ ವೇಳೆ ವೇಳೆ ಡೊಳ್ಳು ಕುಣಿತ, ವೀರಗಾಸೆ ಇದ್ದವು.
ಕಂದಾಯ ಭವನದಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮೊದಲೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಪಕ್ಷಗಳು ಸೋಲು ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಜೆಡಿಎಸ್ ಕ್ಷೇತ್ರವನ್ನು ಉಳಿಸಿಕೊಂಡಿದ್ದು, ಆದರೆ ಈಗ ಅಭ್ಯರ್ಥಿಗಳೇ ಇಲ್ಲದಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಕ್ಷೇತ್ರವನ್ನು ಜೆಡಿಎಸ್ ಬಿಟ್ಟು ಕೊಟ್ಟಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ. ಕಳೆದ ಫೆ.3ರಿಂದ ನಿರಂತರವಾಗಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬೂತ್ ಮಟ್ಟದಿಂದ ಹಿಡಿದು ಕ್ಷೇತ್ರದವರೆಗೆ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದ್ದೇನೆ. ಉತ್ತರ ಕ್ಷೇತ್ರದಲ್ಲಿ ಉತ್ತಮವಾದ ವಾತವಾರಣ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷದ ಸಾಧನೆ ಚುನಾವಣೆಯಲ್ಲಿ ವಿಶೇಷವಾದ ಶಕ್ತಿ ನೀಡಿದೆ. ಸಾಮಾನ್ಯ ಜನರ ಭಾವನೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬುದು. ಸಾಮಾನ್ಯ ಜನತೆ ಮಾತ್ರವಲ್ಲ, ಬೇರೆ ಪಕ್ಷದಲ್ಲಿ ಗುರುತಿಸಿಕೊಂಡವರು ಮತ್ತೆ ಮೋದಿ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ @BJP4Karnataka ಅಭ್ಯರ್ಥಿಯಾಗಿ ಶ್ರೀ @DVSBJP ರವರಿಂದ ಇಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ.#LokSabhaElections2019 #PhirEkBaarModiSarkar pic.twitter.com/8s0PfwvoDv
— Chowkidar Dr. Ashwathnarayan (@drashwathcn) March 25, 2019
ರೋಡ್ ಶೋನಲ್ಲಿ ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕ ಗೋವಿಂದ ಕಾರಜೋಳ, ಶಾಸಕರಾದ ಡಾ.ಸಿ.ಎನ್.ಅಶ್ವತ್‌್ಥ ನಾರಾಯಣ, ನಾರಾಯಣಸ್ವಾಮಿ, ಮಾಜಿ ಶಾಸಕರಾದ ಮುನಿರಾಜು, ಸತೀಶ್ ರೆಡ್ಡಿ, ರಾಮಚಂದ್ರೇಗೌಡ ಇನ್ನಿತರರಿದ್ದರು.
ಡಿವಿಎಸ್ ಆಸ್ತಿ ಡಬಲ್: 2014ರಲ್ಲಿ 10 ಕೋಟಿ ಇದ್ದಿದ್ದು ಈಗ 21 ಕೋಟಿ ರು
ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಬಳಿ 20 ಕೋಟಿ ರು. ಮೌಲ್ಯದ ಆಸ್ತಿಯಿದೆ. ಇದು ಕಳೆದ ಬಾರಿಯ ಚುನಾವಣೆ ವೇಳೆ ಸಲ್ಲಿಸಿದ್ದ ಆಸ್ತಿ ವಿವರಕ್ಕೆ ಹೋಲಿಸಿದರೆ ದ್ವಿಗುಣಗೊಂಡಂತಾಗಿದೆ.
2014ರ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ 10 ಕೋಟಿ ರು.ಗಿಂತ ಹೆಚ್ಚು ಎಂದು ಉಲ್ಲೇಖ ಮಾಡಲಾಗಿದ್ದು, ಈ ಬಾರಿಯ ಆಸ್ತಿ ವಿವರದಲ್ಲಿ 20 ಕೋಟಿ ರು.ಗಿಂತ ಹೆಚ್ಚು ನಮೂದಿಸಿದ್ದಾರೆ. ಕುಟುಂಬದ ಆಸ್ತಿಯು 20.93 ಕೋಟಿ ರು. ಇದೆ ಎಂದು ಸೋಮವಾರ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಸದಾನಂದಗೌಡ ತಮ್ಮ ಬಳಿ 2.55 ಲಕ್ಷ ರು. ನಗದು ಹೊಂದಿದ್ದಾರೆ. ಪತ್ನಿ ಡಾಟಿ ಬಳಿ 82,488 ರು. ಇದೆ. ಸದಾನಂದಗೌಡರ ಹೆಸರಲ್ಲಿ 2.56 ಕೋಟಿ ರು. ಚರಾಸ್ತಿ, ಪತ್ನಿ ಹೆಸರಲ್ಲಿ 76.05 ಲಕ್ಷ ರು. ಚರಾಸ್ತಿ ಇದೆ. ವಿವಿಧ ಬ್ಯಾಂಕ್‌ಗಳಲ್ಲಿ 6.32 ಲಕ್ಷ ರು. ಠೇವಣಿ ಮತ್ತು ಪತ್ನಿಯ ಹೆಸರಲ್ಲಿ 2.55 ಲಕ್ಷ ರು. ಠೇವಣಿ ಇದೆ. ಸದಾನಂದಗೌಡ 22.5 ಲಕ್ಷಕ್ಕೂ ಅಧಿಕ ಮೊತ್ತವನ್ನು ಷೇರಿನಲ್ಲಿ ಹೂಡಿಕೆ ಮಾಡಿದ್ದಾರೆ. ಡಿವಿಎಸ್ ಹೆಸರಲ್ಲಿ 15.59 ಕೋಟಿ ರು. ಮತ್ತು ಪತ್ನಿ ಹೆಸರಲ್ಲಿ 2.02 ಕೋಟಿ ರು. ಸ್ಥಿರಾಸ್ತಿ ಇದೆ. 10.34 ಕೋಟಿ ರು. ಸಾಲ ಹೊಂದಿರುವ ಸದಾನಂದಗೌಡ ತಮ್ಮ ಪತ್ನಿ ಹೆಸರಲ್ಲೂ 9 ಲಕ್ಷ ರು. ಸಾಲ ಹೊಂದಿದ್ದಾರೆ. ಸದಾನಂದಗೌಡ ಹೆಸರಲ್ಲಿ 5.42 ಲಕ್ಷ ರು. ಮೌಲ್ಯದ 175 ಗ್ರಾಂ ಚಿನ್ನ, 2.07 ಲಕ್ಷ ರು. ಮೌಲ್ಯದ ಬೆಳ್ಳಿ ಮತ್ತು ಪತ್ನಿ ಬಳಿ 14.24 ಲಕ್ಷ ರು. ಮೌಲ್ಯದ 475 ಗ್ರಾಂ ಚಿನ್ನ, 83 ಸಾವಿರ ರು. ಮೌಲ್ಯದ 2 ಕೆ.ಜಿ. ಬೆಳ್ಳಿ ಇರುವ ಬಗ್ಗೆ ಆಸ್ತಿ ವಿವರದಲ್ಲಿ ತಿಳಿಸಲಾಗಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 26, 2019, 8:06 AM IST