ನವದೆಹಲಿ: ದಲಿತರ ವಿಚಾರವಾಗಿ ಧ್ವನಿಯೆತ್ತದೆ ಮೌನಕ್ಕೆ ಶರಣಾಗುತ್ತಿದ್ದ ಕಾರಣಕ್ಕಾಗಿಯೇ ರಾಮನಾಥ್‌ ಕೋವಿಂದ್‌ ಅವರನ್ನು ಬಿಜೆಪಿ ರಾಷ್ಟ್ರಪತಿ ಹುದ್ದೆಗೆ ನಾಮ ನಿರ್ದೇಶನ ಮಾಡಿತ್ತು ಎಂದು ಸಂಸದ ಉದಿತ್‌ ರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಯುವ್ಯ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ತಮ್ಮ ಬದಲಿಗೆ ಪಂಜಾಬಿ ಸೂಫಿ ಹಾಡುಗಾರ ಹನ್ಸ್‌ ರಾಜ್‌ ಹನ್ಸ್‌ ಅವರಿಗೆ ನೀಡಿದ್ದರಿಂದ ಕ್ರೋಧಗೊಂಡ ಸಂಸದ ಉದಿತ್‌, ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಗೆ ಬಿಗ್ ಶಾಕ್: ದಲಿತ ನಾಯಕ ಕೈಗೆ!

ಈ ಬಗ್ಗೆ ಬುಧವಾರ ಮಾತನಾಡಿದ ಉದಿತ್‌ ರಾಜ್‌ ಅವರು, ‘ರಾಮನಾಥ್‌ ಕೋವಿಂದ್‌ ಅವರಿಗೆ ಒಂದು ಹಂತದಲ್ಲಿ ಬಿಜೆಪಿ ಲೋಕಸಭಾ ಟಿಕೆಟ್‌ ನಿರಾಕರಿಸಿತ್ತು. ಆದರೆ, ಅವರು ಆ ಬಗ್ಗೆ ಧ್ವನಿಯೆತ್ತಲಿಲ್ಲ. ಅಲ್ಲದೆ, ದಲಿತರ ಪರವಾಗಿಯೂ ಅವರು ಧ್ವನಿಯೆತ್ತಲ್ಲ. ಅದಕ್ಕಾಗಿಯೇ ಅವರನ್ನು ರಾಷ್ಟ್ರಪತಿ ಮಾಡಲಾಯಿತು. ಅದೇ ರೀತಿ ನಾನು ಸಹ ದಲಿತರ ಪರ ಧ್ವನಿಯೆತ್ತದೆ ಸುಮ್ಮನಿದ್ದರೆ, ನನ್ನನ್ನು ಖಂಡಿತವಾಗಿಯೂ ಬಿಜೆಪಿ ಪ್ರಧಾನಿಯಾಗಿಸುತ್ತಿತ್ತು,’ ಎಂದು ಹೇಳಿದ್ದಾರೆ.

ಬಿಜೆಪಿಗೆ ದಲಿತರ ಮತಗಳು ಬೇಕು. ಆದರೆ, ಅದಕ್ಕೆ ದಲಿತ ನಾಯಕರ ಅಗತ್ಯವಿಲ್ಲ. ಅಲ್ಲದೆ, ದಲಿತ ನಾಯಕನಿದ್ದರೂ ಅವನು ಅವರು ಹೇಳಿದಂತೆ ಕೇಳುವವನಾಗಿರಬೇಕು ಎಂದು ಕಿಡಿಕಾರಿದರು.