ನವದೆಹಲಿ(ಮಾ.30): ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವುಳ್ಳ ರೈಲ್ವೇ ಟಿಕೆಟ್‌ಗಳನ್ನು ಹಿಂಪಡೆದ ಬಳಿಕ, ಇದೀಗ ವಿಮಾನ ಟಿಕೆಟ್‌ನಲ್ಲೂ ಮೋದಿ ಭಾವಚಿತ್ರವುಳ್ಳ ಜಾಹೀರಾತು ಇರುವುದು ಬೆಳಕಿಗೆ ಬಂದಿದೆ.

ರೈಲ್ವೇ ಇಲಾಖೆ #MainBhiChowkidar ಮುದ್ರಣವುಳ್ಳ ಟಿಕೆಟ್ ಹಂಚಿಕೆ ಮಾಡುತ್ತಿತ್ತು. ತದನಂತರ ಶತಾಬ್ದಿ ರೈಲಿನಲ್ಲಿ ಕೊಡುವ ಚಹಾ ಕಪ್ ಮೇಲೂ #MainBhiChowkidar ಕಾಣಿಸಿಕೊಂಡಿತ್ತು. ಇದಾದ ಬಳಿಕ ಕೇಂದ್ರ ಚುನಾವಣಾ ಆಯೋಗ ರೈಲ್ವೇ ಇಲಾಖೆಗೆ ನೊಟೀಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಇದೀಗ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ  ವಿಮಾನದ ಟಿಕೆಟ್‌ನಲ್ಲೂ ಮೋದಿ ಭಾವಚಿತ್ರವುಳ್ಳ ಜಾಹೀರಾತು ಕಾಣಿಸಿಕೊಂಡಿದೆ. ಮಧುರೈ ಪ್ರಯಾಣಿಕರೊಬ್ಬರು ಏರ್ ಇಂಡಿಯಾ ವಿಮಾನದ ಟಿಕೆಟ್ ಫೋಟೋ ಶೇರ್ ಮಾಡಿದ್ದು, ವೈಬ್ರಂಟ್ ಗುಜರಾತ್‌ನ ಜಾಹೀರಾತು ಇದೆ.

ಈ ಕುರಿತು ವಿಮಾನಯಾನ ಇಲಾಖೆಗೂ ನೋಟಿಸ್ ಜಾರಿಗೊಳಿಸಿರುವ ಕೇಂದ್ರ ಚುನಾವಣಾ ಆಯೋಗ, ಉತ್ತರಿಸುವಂತೆ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.