ಬೆಂಗಳೂರು, [ಮಾ.23]: ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಶತಾಯಗತಾಯ ಗೆಲ್ಲಲ್ಲೇ ಬೇಕೆಂಬ ಹಠಕ್ಕೆ ಜೆಡಿಎಸ್ ಬಿದ್ದಿದೆ. 

ಆದ್ರೆ, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಬೆಂಬಲ ನೀಡಲು ಕೆಲ ಕಾಂಗ್ರೆಸ್ ನಾಯಕರು ನಿರಾಕರಿಸುತ್ತಿದ್ದು, ಜೆಡಿಎಸ್ ನಾಯಕರಿಗೆ ನಿದ್ದೆಗೆಡಿಸಿದೆ.

ಜಿಲ್ಲೆಯ ಕಾಂಗ್ರೆಸ್ ನಾಯಕರು ಮೈತ್ರಿ ಅಭ್ಯರ್ಥಿಯನ್ನು ಪಕ್ಕಕ್ಕಿಟ್ಟು ಸುಮಲತಾ ಅಂಬರೀಶ್ ಬೆನ್ನಿಗೆ ನಿಂತಿದ್ದಾರೆ. ಇದ್ರಿಂದ ಅನಿತಾ ಕುಮಾರಸ್ವಾಮಿ ಆತಂಕಕ್ಕೊಳಗಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಮೊರೆ ಹೋಗಿದ್ದಾರೆ.

ಸಂಕಟ ಬಂದಾಗ ಸಿದ್ರಾಮಣ್ಣ ಎಂದ ರೇವಣ್ಣ, ಪುತ್ರನಿಗಾಗಿ ಪ್ರತಿಷ್ಠೆ ಸೈಡಿಗೆ

ಒಂದು ಕಡೆ ಕುಮಾರಸ್ವಾಮಿ ಯಾವ ಕಾಂಗ್ರೆಸ್ ನಾಯಕರ ಕಾಲು ಹಿಡಿಯುವುದಕ್ಕೆ ಹೋಗಲ್ಲ ಎಂದು ಹೇಳಿದ್ದಾರೆ. ಇತ್ತ ಪತ್ನಿ ಅನಿತಾ ಕುಮಾರಸ್ವಾಮಿ ಮಾತ್ರ ಜಿಲ್ಲೆಯಲ್ಲಿನ ಕಾಂಗ್ರೆಸ್ ನಾಯಕರ ಮನವೋಲಿಸುವಂತೆ ಸಿದ್ದರಾಮಯ್ಯ ಬಳಿ ಹೋಗಿದ್ದಾರೆ.

 ಪುತ್ರನ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಡುವಂತೆ ಶಾಸಕಿ ಅನಿತಾ ಕುಮಾರಸ್ವಾಮಿ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಶನಿವಾರ ಸಿದ್ದರಾಮಯ್ಯ ಅವರ ಕಾವೇರಿಗೆ ನಿವಾಸಕ್ಕೆ ಆಗಮಿಸಿದ ಅನಿತಾ ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿ ನಿಖಿಲ್​ ಪರ ಕೆಲಸ ಮಾಡುವಂತೆ ಚೆಲುವರಾಯ ಸ್ವಾಮಿ ಹಾಗೂ ಬಂಡಿಸಿದ್ದೇಗೌಡ ಸೇರಿದಂತೆ ಕಾಂಗ್ರೆಸ್​ ಕಾರ್ಯಕರ್ತರಿಗೆ ಸೂಚನೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮಾರ್ಚ್​ 25ರಂದು ಮಂಡ್ಯದಲ್ಲಿ ನಿಖಿಲ್​ ನಾಮಪತ್ರ ಸಲ್ಲಿಸಲಿದ್ದು, ಅಂದು ಬರುವಂತೆ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದಾರೆ.

ಜೆಡಿಎಸ್​ನಿಂದ ದಂಗೆಯೆದ್ದು ಕಳೆದ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್​ ಸೇರಿ ಜೆಡಿಎಸ್​ ವಿರುದ್ಧವೇ ಸ್ಪರ್ಧಿಸಿ ಸೋತಿದ್ದ ಚಲುವರಾಯಸ್ವಾಮಿ ಹಾಗೂ ಬಂಡಿಸಿದ್ದೇಗೌಡ ಅವರು ನಿಖಿಲ್​ ವಿರುದ್ಧವಾಗಿ ಕೆಲಸ ಮಾಡಬಹುದು ಎಂಬುದನ್ನು ಮನಗಂಡು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.