ಹಾಸನ, [ಮಾ.23]: ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಜ್ವಲ್ ರೇವಣ್ಣ ಗೆಲುವಿಗಾಗಿ ತಂದೆ ರೇವಣ್ಣ ಪಂಚೆ ಎತ್ತಿಕಟ್ಟಿ ವಿರೊಧಿಗಳ ಮನೆ ಬಾಗಿಲಿಗೆ ಸುತ್ತಾಡುತ್ತಿದ್ದಾರೆ.

ಪುತ್ರ ಪ್ರಜ್ವಲ್ ಗೆಲುವಿಗಾಗಿ ವೈಯಕ್ತಿಕ ಪ್ರತಿಷ್ಠೆ, ವೈರತ್ವವನ್ನೆಲ್ಲ ಬದಿಗಿಟ್ಟ ಸಚಿವ ಎಚ್.ಡಿ.ರೇವಣ್ಣ, ದಶಕಗಳಿಂದ ರಾಜಕೀಯ ಎದುರಾಳಿಗಳಾಗಿ ಗುರುತಿಸಿಕೊಂಡಿದ್ದ ಮುಖಂಡರ ನಿವಾಸಗಳಿಗೆ ಭೇಟಿ ನೀಡಿ, ಬೆಂಬಲ ಸೂಚಿಸುವಂತೆ ಮನವಿ ಮಾಡುತ್ತಿದ್ದಾರೆ.

ಹಾಸನ ಗ್ರೌಂಡ್ ರಿಪೋರ್ಟ್.. ಅಸಲಿ ಕಾಂಗ್ರೆಸ್ಸಿಗರ ನಿಲುವೇನು?

ಮಾಜಿ ಸಚಿವ ಎ.ಮಂಜು ಈ ಬಾರಿ ಬಿಜೆಪಿ ಅಭ್ಯರ್ಥಿ ಆಗಿದ್ದರಿಂದ ಪ್ರಜ್ವಲ್ ಗೆ ಕಷ್ಟವಾಗಿದೆ ಎನ್ನುವುದನ್ನು ಮನಗಂಡಿರುವ ಸಚಿವ ರೇವಣ್ಣ, ಕಾಂಗ್ರೆಸ್ ಪಾಲಿನ ಮತಗಳನ್ನು ಸೆಳೆಯಲು ಹಮ್ಮು, ವೈರತ್ವ ಬದಿಗಿಟ್ಟುದ್ದಾರೆ.

ಸಿದ್ದಣ್ಣನ ಮೊರೆ ಹೋದ ರೇವಣ್ಣ
ಹೌದು...ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಇದ್ದರೂ ಹಾಸನದಲ್ಲಿ ದೋಸ್ತಿ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದಗಳು ನಡೆಯುತ್ತಲೇ ಇವೆ. ರೇವಣ್ಣ ಸಹ ಕಾಂಗ್ರೆಸ್ ನಾಯಕರನ್ನು ಜಿಲ್ಲೆಯಲ್ಲಿ ಕ್ಯಾರೆ ಎನ್ನುತ್ತಿರಲಿಲ್ಲ.

ಇದೀಗ ಮಗನನ್ನು ಗೆಲ್ಲಿಸಲು ನೀವೇ ಆಪತ್ಬಾಂಧವ ಎಂದು ಸಿದ್ದರಾಮಯ್ಯ ಅವರ ಮೊರೆ ಹೋಗಿದ್ದು, ಸಿದ್ದು ಮೂಲಕ ಹಾಸನ ಕಾಂಗ್ರೆಸ್ ನಾಯಕರ ವಿಶ್ವಾಸ ತೆಗೆದುಕೊಳ್ಳುವ ಪ್ರಯತ್ನ ನಡೆಸಿದೆರು.

 ಕಾವೇರಿ ನಿವಾಸದಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾಸನ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು. ಈ ಸಭೆಯಲ್ಲಿ ಎಚ್.ಡಿ. ರೇವಣ್ಣ ಅವರು ಭಾಗವಹಿಸಿದ್ದು, ಪುತ್ರನಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.ಸಭೆಯಲ್ಲಿ ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಾವಗಲ್ ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ ಮತ್ತಿತರರು ಇದ್ದರು. 

ಒಟ್ಟಿನಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹಾಸನದಲ್ಲಿ ತಾವು ನಡೆದಿದ್ದೇ ಹಾದಿ ಎಂದು ಕಾಂಗ್ರೆಸ್ ನಾಯಕರನ್ನು ಕಡೆಗಣಿಸಿದ್ದ ರೇವಣ್ಣ ಇದೀಗ ಸಿದ್ದು ಮೂಲಕ ವಿರೋಧಿಗಳ ಮನವೋಲಿಸುವ ಕಾರ್ಯಕ್ಕಿಳಿದಿದಂತೂ ಸತ್ಯ.