ಅಡ್ವಾಣಿ ಕಣದಲ್ಲಿ ಶಾ ನಾಮಪತ್ರ| ಮೊದಲ ಬಾರಿ ಸ್ಪರ್ಧೆ ಒಂದು ವರ್ಷದಲ್ಲಿ 4.5 ಕೋಟಿ ರು. ಏರಿಕೆ| ಅಫಿಡವಿಟ್ ನಲ್ಲಿ ಶಾ ಘೋಷಿಸಿದ ಒಟ್ಟು ಆಸ್ತಿ ಎಷ್ಟು ಗೊತ್ತಾ?
ಗಾಂಧಿನಗರ[ಮಾ.31]: ಇದೇ ಮೊದಲ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಶನಿವಾರ ನಾಮಪತ್ರ ಸಲ್ಲಿಸಿದರು. ಈವರೆಗೆ ಪಕ್ಷದ ಅತಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಸ್ಪರ್ಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಅವರ ಉತ್ತರಾಧಿಕಾರಿಯಾಗಿ ಶಾ ಅಖಾಡಕ್ಕಿಳಿದಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಭರ್ಜರಿ ರೋಡ್ ಶೋ ನಡೆಸಿದ ಶಾ ಅವರು, ನಂತರ ಕೇಂದ್ರ ಸಚಿವರಾದ ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್, ಎಲ್‌ಜೆಪಿ ಅಧ್ಯಕ್ಷ ರಾಮವಿಲಾಸ್ ಪಾಸ್ವಾನ್, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಸಂಗಡ ಆಗಮಿಸಿ ನಾಮಾಂಕನ ಭರ್ತಿ ಮಾಡಿದರು.
ಬಿಜೆಪಿ ಇಲ್ಲ ಅಂದ್ರೆ ನಾನು ಶೂನ್ಯ: ಗಾಂಧಿನಗರದಿಂದ ಅಮಿತ್ ಶಾ ನಾಮಪತ್ರ!
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನ ಬಳಿ ಇದೆ ಇಷ್ಟು ಆಸ್ತಿ!
ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಮ್ಮ ಬಳಿ 38.81 ಕೋಟಿ ರು. ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಇದು 2017ರಲ್ಲಿ ರಾಜ್ಯಸಭೆಗೆ ಸ್ಪರ್ಧಿಸುವ ವೇಳೆ ಮಾಡಿದ್ದ ಘೋಷಣೆಗಿಂತ 4.5 ಕೋಟಿ ರು. ಮತ್ತು 2012ರಲ್ಲಿ ವಿಧಾನಸಭಾ ಚುನಾವಣೆ ವೇಳೆ ಮಾಡಿದ್ದ ಆಸ್ತಿ ಘೋಷಣೆಗಿಂತ 3 ಪಟ್ಟು ಹೆಚ್ಚು.
ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ವೇಳೆ ನೀಡಿರುವ ಪ್ರಮಾಣಪತ್ರದ ಪ್ರಕಾರ, ತಮ್ಮ ಮತ್ತು ತಮ್ಮ ಪತ್ನಿ ಬಳಿ 38.81 ಕೋಟಿ ರು. ಆಸ್ತಿ ಇದೆ. ಇದರಲ್ಲಿ 23.45 ಕೋಟಿ ರು. ಪಿತ್ರಾರ್ಜಿತ ಚರಾಸ್ತಿ ಮತ್ತು ಸ್ಥಿರಾಸ್ತಿಯೂ ಸೇರಿದೆ. ತಮ್ಮ ಮತ್ತು ತಮ್ಮ ಪತ್ನಿ ಹೆಸರಲ್ಲಿ ವಿವಿಧ ಬ್ಯಾಂಕ್ ಖಾತೆಯಲ್ಲಿ 27.80 ಲಕ್ಷ ರು. ಹಣ ಇದೆ. 9.80 ಲಕ್ಷ ರು. ನಿಶ್ಚಿತ ಠೇವಣಿ ಇಟ್ಟಿದ್ದೇವೆ. ಜೊತೆಗೆ ತಮ್ಮ ಬಳಿ 20,633 ರು. ನಗದು ಹಣ ಇದೆ ಎಂದು ಮಾಹಿತಿ ನೀಡಿದ್ದಾರೆ.
2017ರಲ್ಲಿ ಅಮಿತ್ ಶಾ ಅವರು ಗುಜರಾತಿನಿಂದ ರಾಜ್ಯಸಭೆಗೆ ಸ್ಪರ್ಧಿಸಿದ ವೇಳೆ 34.31 ಕೋಟಿ ರು. ಆಸ್ತಿ ಹೊಂದಿದ್ದರು. ಇದಕ್ಕೆ ಹೋಲಿಸಿದರೆ ಅಮಿತ್ ಶಾ ಅವರ ಆಸ್ತಿ ಒಂದು ವರ್ಷದಲ್ಲಿ 4.5 ಕೋಟಿ ರು.ಗಳಷ್ಟುಏರಿಕೆಯಾಗಿದೆ. ರಾಜ್ಯಸಭಾ ಸಂಸದರಾಗಿ ತಾವು ಸ್ವೀಕರಿಸಿದ ವೇತನ, ಆಸ್ತಿ ಬಾಡಿಗೆಯಿಂದ ಬಂದ ಹಣ ಮತ್ತು ಕೃಷಿಯಿಂದ ಈ ಆದಾಯಗಳಿಸಿರುವುದಾಗಿ ಅಮಿತ್ ಶಾ ತಮ್ಮ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...
