ಹಾಸನ[ಏ.13]: ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಪರ ಪ್ರಚಾರಕ್ಕೆಂದು ಜಿಲ್ಲೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಳೆನರಸೀಪುರದಲ್ಲಿರುವ ಸಚಿವ ಎಚ್‌.ಡಿ.ರೇವಣ್ಣ ಮನೆಯಲ್ಲಿ ಗುರುವಾರ ರಾತ್ರಿ ಭೋಜನ ಸವಿದರು.

2005ರಲ್ಲಿ ಜೆಡಿಎಸ್‌ ತೊರೆದ ನಂತರ ದೇವೇಗೌಡರೊಂದಿಗೆ ಪರಸ್ಪರ ಅಂತರ ಕಾಯ್ದುಕೊಂಡಿದ್ದ ಸಿದ್ದರಾಮಯ್ಯನವರು ಸುಮಾರು ಒಂದುವರೆ ದಶಕದ ಬಳಿಕ ರೇವಣ್ಣನವರ ಮನೆಗೆ ಆಗಮಿಸಿದ್ದರು.

ಗುರುವಾರ ರಾತ್ರಿ 10ಕ್ಕೆ ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹಳ್ಳಿ ಮೈಸೂರಿನಲ್ಲಿ ಚುನಾವಣೆ ಪ್ರಚಾರ ಮುಗಿಸಿದ ಸಿದ್ದರಾಮಯ್ಯ, ತಮ್ಮ ಆಪ್ತರೊಂದಿಗೆ ರೇವಣ್ಣ ಮನೆಗೆ ಆಗಮಿಸಿ, ಭೋಜನ ಸವಿದರು. ಊಟ ಮಾಡುತ್ತಲೇ ಕೆಲ ಸಮಯ ಕುಶಲೋಪರಿ ಮಾತುಕತೆ ನಡೆಸಿದ ಸಿದ್ದರಾಮಯ್ಯ ಬಳಿಕ ನೇರವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.