28 ಕ್ಷೇತ್ರಗಳಿಗೆ 478 ಅಭ್ಯರ್ಥಿಗಳ ಸೆಣಸಾಟ
28 ಕ್ಷೇತ್ರಗಳಿಗೆ 478 ಅಭ್ಯರ್ಥಿಗಳ ಸೆಣಸಾಟ| ಮೊದಲ ಹಂತದ ಚುನಾವಣೆಗೆ 241, ಎರಡನೇ ಹಂತಕ್ಕೆ 237 ಮಂದಿ ಸ್ಪರ್ಧೆ| 2014ಕ್ಕಿಂತ ಈ ಬಾರಿ ಅಭ್ಯರ್ಥಿಗಳು ಅಧಿಕ| ಬೆಳಗಾವಿಯಲ್ಲಿ ಅತಿ ಹೆಚ್ಚು 57 ಅಭ್ಯರ್ಥಿಗಳು ಕಣದಲ್ಲಿ| ರಾಯಚೂರಿನಲ್ಲಿ ಅತಿ ಕಡಿಮೆ 5 ಮಂದಿ ಅಖಾಡದಲ್ಲಿ
ಬೆಂಗಳೂರು[ಏ.09]: ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿಯ ಲೋಕಸಭಾ ಚುನಾವಣೆಗೆ ಅಧಿಕ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅಖಾಡಕ್ಕೆ ಧುಮುಕಿದ್ದಾರೆ.
ಲೋಕಸಭಾ ಚುನಾವಣೆಯ ಎರಡನೇ ಹಂತಕ್ಕೂ ನಾಮಪತ್ರ ಹಿಂಪಡೆಯುವ ದಿನ ಮುಕ್ತಾಯಗೊಂಡಿದೆ. ಅಭ್ಯರ್ಥಿಗಳ ಸಂಖ್ಯೆಯ ಬಗ್ಗೆ ಸೋಮವಾರ ಸ್ಪಷ್ಟಚಿತ್ರಣ ಹೊರಬಿದ್ದಿದ್ದು, ಅಖಾಡದಲ್ಲಿ ಒಟ್ಟು 478 ಅಭ್ಯರ್ಥಿಗಳು ತಮ್ಮ ಅದೃಷ್ಟಪರೀಕ್ಷೆಗಿಳಿದಿದ್ದಾರೆ. ಮೊದಲ ಹಂತದಲ್ಲಿ 241 ಮಂದಿ ಅಖಾಡದಲ್ಲಿದ್ದರೆ, ಎರಡನೇ ಹಂತಕ್ಕೆ ನಡೆಯುವ ಚುನಾವಣೆಯಲ್ಲಿ 237 ಮಂದಿ ಕಣದಲ್ಲಿದ್ದಾರೆ. 2014ರಲ್ಲಿ 413 ಮಂದಿ ಸ್ಪರ್ಧೆಯಲ್ಲಿದ್ದರು.
ಚುನಾವಣೆಗೆ ಸ್ಪರ್ಧಿಸಿರುವ ಒಟ್ಟು ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಆಯೋಗವು ಸೋಮವಾರ ಪ್ರಕಟಿಸಿದೆ.
ಎರಡನೇ ಹಂತಕ್ಕೆ ಸೋಮವಾರ ನಾಮಪತ್ರ ಪಡೆಯಲು ಕೊನೆಯ ದಿನವಾಗಿದ್ದು, ಒಟ್ಟು 45 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. 311 ಅಭ್ಯರ್ಥಿಗಳು 457 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದರು. ಈ ಪೈಕಿ 297 ಪುರುಷರು ಮತ್ತು 14 ಮಹಿಳೆಯರು ನಾಮಪತ್ರಗಳನ್ನು ಸಲ್ಲಿಸಿದ್ದರು. ಇದರಲ್ಲಿ 29 ಉಮೇದುವಾರಿಕೆಗಳು ತಿರಸ್ಕೃತಗೊಂಡಿದ್ದು, 282 ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕೃತಗೊಳಿಸಲಾಯಿತು. 45 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. ಅಂತಿಮವಾಗಿ ಎರಡನೇ ಹಂತದಲ್ಲಿ 237 ಅಭ್ಯರ್ಥಿಗ‡ಳು ಕಣದಲ್ಲಿ ಉಳಿದಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಚುನಾವಣೆಯಲ್ಲಿ 241 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಎರಡನೇ ಹಂತದಲ್ಲಿ 237 ಮಂದಿ ಅಖಾಡದಲ್ಲಿದ್ದಾರೆ. ಮೊದಲ ಹಂತದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 35 ಮಂದಿ ಸ್ಪರ್ಧಿಸಿದ್ದಾರೆ. ಎರಡನೇ ಹಂತದಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 57 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ರಾಜ್ಯದಲ್ಲಿ ಬೆಳಗಾವಿ ಕ್ಷೇತ್ರದಲ್ಲಿಯೇ ಅಧಿಕವಾಗಿ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ರಾಯಚೂರಿನಲ್ಲಿ 5 ಮತ್ತು ಹಾಸನದಲ್ಲಿ 6 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅತಿ ಕಡಿಮೆ ಅಭ್ಯರ್ಥಿಗಳಿರುವ ಕ್ಷೇತ್ರಗಳಾಗಿವೆ ಎಂದು ಹೇಳಿದರು.
ಬೆಳಗಾವಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವ ಹಿನ್ನೆಲೆಯಲ್ಲಿ 4 ಬ್ಯಾಲೆಟ್ ಯೂನಿಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. 9 ಕ್ಷೇತ್ರದಲ್ಲಿ 2 ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುವುದು. ಇನ್ನುಳಿದ ಕ್ಷೇತ್ರದಲ್ಲಿ ಒಂದೊಂದು ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುತ್ತದೆ. ಒಂದು ಬ್ಯಾಲೆಟ್ ಯೂನಿಟ್‌ನಲ್ಲಿ 16 ಅಭ್ಯರ್ಥಿಗಳ ಹೆಸರು ನಮೂದಾಗಿರುತ್ತದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 5 ಕೋಟಿ ಜನತೆಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ. 2018ರ ವಿಧಾನಸಭೆ ಚುನಾವಣೆ ವೇಳೆ ಮೂರುವರೆ ಕೋಟಿ ಜನರಿಗೆ ಪ್ರಾತ್ಯಕ್ಷಿಕೆ ನೀಡಲಾಗಿತ್ತು ಎಂದು ವಿವರಿಸಿದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...