ಅನಂತಪುರ[ಮೇ.05]: ಮನೆಯಲ್ಲಿ ತಿನ್ನಲು ಅನ್ನವಿಲ್ಲ. ಮತ್ತೊಂದೆಡೆ ಮಕ್ಕಳ ಆರೈಕೆ ಮಾಡಲು ಕುಡುಕ ಪೋಷಕರಿಗೆ ವ್ಯವಧಾನವಿಲ್ಲ. ಪರಿಣಾಮ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಮೂಲದ ಇಬ್ಬರು ಮಕ್ಕಳು ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮಣ್ಣು ತಿಂದು ಸಾವನ್ನಪ್ಪಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಇದೀಗ ಉಳಿದ ಮಕ್ಕಳನ್ನು ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ದಾಖಲಿಸಿಕೊಂಡು ನೋಡಿಕೊಳ್ಳಲಾಗುತ್ತಿದೆ.

ಬಾಗೇಪಲ್ಲಿ ಮೂಲದ ಮಹೇಶ್‌ ಮತ್ತು ಆತನ ಪತ್ನಿ ನಾಗಮಣಿ ಕೂಲಿ ಕೆಲಸ ಅರಸಿ ಕೆಲ ವರ್ಷಗಳ ಹಿಂದೆ ಅನಂಪುರ ಜಿಲ್ಲೆಯ ಕದ್ರಿ ಮಂಡಲ ವ್ಯಾಪ್ತಿಯ ಕುಮ್ಮಾರವಂಡಲಪಲ್ಲೆ ಗ್ರಾಮಕ್ಕೆ ಆಗಮಿಸಿದ್ದರು. ಇಲ್ಲಿನ ಹಮಾಲಿ ಕಾಲೋನಿಯಲ್ಲಿ ಸಣ್ಣದೊಂದು ಗುಡಿಸಲು ಹಾಕಿಕೊಂಡು ಕುಟುಂಬ ವಾಸವಿತ್ತು. ಇವರ ಜೊತೆ ಇವರ 5 ಮಕ್ಕಳು, ನಾಗಮಣಿಯ ತಾಯಿ ಮತ್ತು ನಾಗಮಣಿಯ ಸೋದರಿಯ ಮಗು ಕೂಡಾ ವಾಸವಿತ್ತು.

ಮಹೇಶ್‌, ನಾಗಮಣಿ ಮತ್ತು ಆಕೆಯ ತಾಯಿ ಮೂವರು ಕುಡುಕರು. ಮಹೇಶ್‌ ಮತ್ತು ನಾಗಮಣಿ ಕೆಲಸಕ್ಕೆಂದು ಹೊರಗೆ ಹೋಗುತ್ತಿದ್ದರು. ಅಜ್ಜಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಮದ್ಯವ್ಯಸನಿಗಳಾದ ಕಾರಣ ಮೂವರೂ ಮನೆಯಲ್ಲಿ ಸರಿಯಾಗಿ ಊಟ ಸಿದ್ಧಪಡಿಸುತ್ತಿರಲಿಲ್ಲ. ಹೀಗಾಗಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಪರಿಣಾಮ ಮಕ್ಕಳಿಗೆ ಸರಿಯಾಗಿ ಊಟ ಸಿಗುತ್ತಿರಲಿಲ್ಲ. ಹೀಗಾಗಿ ಮಕ್ಕಳು ಅನಿವಾರ್ಯವಾಗಿ ಮಣ್ಣು ತಿನ್ನುತ್ತಿದ್ದರು. ಇದೇ ಕಾರಣದಿಂದಾಗಿ 6 ತಿಂಗಳ ಹಿಂದೆ ಈ ದಂಪತಿಯ 3 ವರ್ಷದ ಸಂತೋಷ್‌ ಎಂಬ ಮಗು ಸಾವನ್ನಪ್ಪಿತ್ತು. ಈ ವಿಷಯವನ್ನು ಯಾರಿಗೂ ತಿಳಿಸದ ಕುಟುಂಬ ಮನೆಯ ಸಮೀಪದ ಜಾಗದಲ್ಲೇ ಮಗುವನ್ನು ಹೂತುಹಾಕಿ ಸುಮ್ಮನಾಗಿತ್ತು.

ಇದೀಗ ನಾಗಮಣಿ ಸೋದರಿಯ ಮಗ ವೆನ್ನೆಲಾ ಕೂಡಾ ಹಸಿವು ತಾಳಲಾಗದೇ ಮಣ್ಣು ತಿಂದು ಸಾವನ್ನಪ್ಪಿದೆ. ಒಂದು ವರ್ಷದ ಹಿಂದೆ ಅನಾರೋಗ್ಯದ ಕಾರಣ ನಾಗಮಣಿ ಮತ್ತು ಮಹೇಶ್‌ ದಂಪತಿಯ ಮಗಳು ಕೂಡಾ ಸಾವನ್ನಪ್ಪಿದ್ದಳು.

ಈ ವಿಷಯ ತಿಳಿಯುತ್ತಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಕುಟುಂಬದ ಉಳಿದ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸಿ ಔಷಧೋಪಚಾರ ಒದಗಿಸಿವೆ. ಘಟನೆ ಕುರಿತು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿಭಾಗೀಯ ಕಂದಾಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.