ನವದೆಹಲಿ[ಮೇ.27]: ರಾಜಕಾರಣವನ್ನು ಅಪರಾಧ ಮುಕ್ತಗೊಳಿಸಬೇಕೆಂಬ ಬೇಡಿಕೆಗಳು ತೀವ್ರಗೊಂಡಿರುವ ಹೊತ್ತಿನಲ್ಲೇ, 17ನೇ ಲೋಕಸಭೆಗೆ ಆಯ್ಕೆಯಾದ ಸುಮಾರು ಅರ್ಧದಷ್ಟುಸಂಸದರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ ಎಂಬ ವಿಷಯ ಬೆಳಕಿಗೆ ಬಂದಿದೆ. ಅದರಲ್ಲೂ ಶೇ.26ರಷ್ಟುಜನರ ವಿರುದ್ಧ ಗಂಭೀರವಾದ ಕ್ರಿಮಿನಲ್‌ ಪ್ರಕರಣಗಳಿವೆ.

ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್‌) ಗೆಲುವು ಸಾಧಿಸಿದ 539 ಅಭ್ಯರ್ಥಿಗಳ ಬಗ್ಗೆ ವಿಶ್ಲೇಷಣೆ ನಡೆಸಿದ್ದು, 233 ಸಂಸದರು ಅಥವಾ ಶೇ.43ರಷ್ಟುಸಂಸದರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳು ದಾಖಲಾಗಿವೆ. ಬಿಜೆಪಿಯ 116, ಕಾಂಗ್ರೆಸ್‌ನ 29, ಜೆಡಿಯುನ 13, ಡಿಎಂಕೆಯ 10 ಟಿಎಂಸಿಯ 9 ಶಾಸಕರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ. ಅತ್ಯಾಚಾರ, ಕೊಲೆಯತ್ನ ಮತ್ತು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಸಂಸದರು ಎದುರಿಸುತ್ತಿದ್ದಾರೆ. 29 ಸಂಸದರು ದ್ವೇಷದ ಭಾಷಣ ಮಾಡಿದ ಆರೋಪ ಎದುರಿಸುತ್ತಿದ್ದಾರೆ ಎಂದು ಎಡಿಆರ್‌ ವರದಿ ತಿಳಿಸಿದೆ.

ಬಿಜೆಪಿಯ 5, ಬಿಎಸ್‌ಪಿಯ 2, ಕಾಂಗ್ರೆಸ್‌ ಮತ್ತು ಎನ್‌ಸಿಪಿ, ವೈಎಸ್‌ ಕಾಂಗ್ರೆಸ್‌ನ ತಲಾ ಒಂದು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಭೋಪಾಲ್‌ನಲ್ಲಿ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಸೋಲಿಸಿ ಸಂಸದೆಯಾಗಿರುವ ಪ್ರಜ್ಞಾ ಸಿಂಗ್‌ ಠಾಕೂರ್‌, ಮಲಾಗಾಂವ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನೆಯ ಆರೋಪ ಎದುರಿಸಿದ್ದರು. ಕೇರಳದ ಇಡುಕ್ಕಿ ಲೋಕಸಭಾ ಕ್ಷೇತ್ರದ ಸಂಸದ ಡೀನ್‌ ಕುರಿಯಕೋಸ್‌ 204 ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಯಾವ ಪಕ್ಷದಲ್ಲಿ ಎಷ್ಟು ಅಭ್ಯರ್ಥಿಗಳು?

ಬಿಜೆಪಿ 116

ಕಾಂಗ್ರೆಸ್‌ 29

ಜೆಡಿಯು 13

ಡಿಎಂಕೆ 10

ಟಿಎಂಸಿ 9