ತುಮಕೂರು: ಸರ್ಕಾರಿ ಶಾಲೆಗೆ ಜಿ.ಪಂ ಸಿಇಒ ದಿಢೀರ್ ಭೇಟಿ, ಶಿಕ್ಷಕರು ಗೈರಾದರೆ ಕಠಿಣ ಕ್ರಮದ ಎಚ್ಚರಿಕೆ..!
ಹೊಸಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಭು. ಜಿ ಅವರು, ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಿದರು. ಸ್ಥಳದಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಎಚ್ಚರಿಕೆ ನೀಡಿದರು.
ತುಮಕೂರು(ಜು.16): ಶಾಲೆಗಳಲ್ಲಿ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಬೇಕು. ಗೈರು ಹಾಗಿರುವುದು ನನ್ನ ಗಮನಕ್ಕೆ ಬಂದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು. ಜಿ ಎಚ್ಚರಿಸಿದ್ದಾರೆ.
ಇಂದು(ಮಂಗಳವಾರ) ಹೊಸಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಪ್ರಭು. ಜಿ ಅವರು, ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಿದರು. ಸ್ಥಳದಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಎಚ್ಚರಿಕೆ ನೀಡಿದರು.
ಡಿಗ್ರಿ ಓದಬೇಡಿ... ಪಂಕ್ಚರ್ ಅಂಗಡಿ ತೆರೆಯಿರಿ: ಬಿಜೆಪಿ ಶಾಸಕ
ಶಾಲೆಯಲ್ಲಿ 109 ಮಕ್ಕಳಿದ್ದು ಶಿಕ್ಷಕರೇ ಇಲ್ಲದಿದ್ದರೆ ಶಾಲೆ ನಡೆಯುವುದಾದರೂ ಹೇಗೆ. ಶಿಕ್ಷಕರೇ ಗೈರು ಹಾಜರಾತಿ ಪಡೆದರೆ ಮಕ್ಕಳು ಶಿಕ್ಷಣದಲ್ಲಿ ಹೇಗೆ ಸಾಧನೆ ಮಾಡುತ್ತಾರೆ. ಇಲಾಖೆ ವತಿಯಿಂದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರು ಶಿಕ್ಷಕರು ಮಾಡುವ ತಪ್ಪುಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ಶಿಕ್ಷಕರಾದವರು ಪ್ರತಿ ಮಗುವಿನ ಮೇಲು ಗಮನವಿಡಬೇಕು. ಮಕ್ಕಳು ಗೈರು ಹಾಜರಾತಿ ಪಡೆದರೆ ಅದಕ್ಕೆ ಕಾರಣವನ್ನು ಪಡೆದು ಪೋಷಕರಿಗೆ ಮಾಹಿತಿಯನ್ನು ನೀಡಬೇಕು. ಮಕ್ಕಳು ಶಾಲೆಗೆ ಬಾರದಿದ್ದರೆ ಮಕ್ಕಳಿಗೆ ಒಂದು ದಿನದ ಪಾಠ ಮತ್ತೊಂದು ದಿನಕ್ಕೆ ಅರ್ಥವಾಗುವುದಿಲ್ಲ. ಆ ಮಗುವಿನ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ ಎಂದರು.
ಬೆಂಗಳೂರು ಕಾನ್ವೆಂಟ್ ಮಾದರಿಯಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿ: ಸಚಿವ ಎಂ.ಬಿ.ಪಾಟೀಲ್
ಮಕ್ಕಳ ಜೊತೆ ಸಂವಾದ ನಡೆಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರತಿಯೊಬ್ಬರು ಶಾಲೆಗೆ ಹಾಜರಾಗಬೇಕು. ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಕಲಿಯಬೇಕು ಎಂದರು. ನಂತರ ಮಕ್ಕಳಿಗೆ ಮಗ್ಗಿ ಹಾಗೂ ಗಣಿತದ ಪಾಠವನ್ನು ಹೇಳಿಕೊಟ್ಟರು.
ನಂತರ ಶಿಕ್ಷಕರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಎಸ್ ಡಿ ಎಂ ಸಿ ಸದಸ್ಯರ ಜೊತೆ ಸಭೆ ನಡೆಸಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಕೂಡಲೇ ನೆಲಸಮ ಮಾಡಬೇಕು. ಅವಶ್ಯಕತೆ ಬಿದ್ದರೆ ಹೊಸ ಕಟ್ಟಡ ನಿರ್ಮಾಣ ಮಾಡಿಕೊಳ್ಳಬೇಕು ಎಂದರು. ಈ ವೇಳೆ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಯೋಜನಾಧಿಕಾರಿಗಳು, ಸಿಡಿಪಿಒ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಸದಸ್ಯರು ಭಾಗಿಯಾಗಿದ್ದರು.