ಚಕ್ರತೀರ್ಥ ಸಿದ್ಧಪಡಿಸಿದ್ದ ಪಠ್ಯಕ್ಕೆ ಕೊಕ್, ಬರಗೂರು ಸಮಿತಿ ಪಠ್ಯ ಮರು ಮುದ್ರಣಕ್ಕೆ ಒತ್ತಡ
ರೋಹಿತ್ ಚಕ್ರತೀರ್ಥ ಸಮಿತಿ ಸಿದ್ದಪಡಿಸಿದ ಪಠ್ಯ ಕೈಬಿಟ್ಟು ಬರಗೂರು ಸಮಿತಿ ಪಠ್ಯ ಮರುಮುದ್ರಿಸಿ ಹಂಚಿ ಎಂದು ಕುವೆಂಪು ಸಮಿತಿ ಒತ್ತಾಯಿಸಿದೆ.
ಬೆಂಗಳೂರು (ಜೂ.4): ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಪರಿಷ್ಕೃತ ಪಠ್ಯಪುಸ್ತಕಗಳನ್ನು ಕೂಡಲೇ ಹಿಂಪಡೆಯಬೇಕು. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯವನ್ನೇ ಮರುಮುದ್ರಿಸಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಬೇಕೆಂದು ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ.ಪಾಟೀಲ್, ಈ ಹಿಂದಿನ ಸರ್ಕಾರ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಮಾಡಿ ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು, ನಾರಾಯಣ ಗುರುಗಳ ಸಹಿತ ಅನೇಕ ದಾರ್ಶನಿಕರ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಕಾರ್ಯವನ್ನು ಮಾಡಿತ್ತು. ಈ ಬಗ್ಗೆ ವ್ಯಾಪಕ ಟೀಕೆ, ವಿರೋಧಗಳು ವ್ಯಕ್ತವಾಗಿದ್ದವು. ಕುವೆಂಪು ಹೋರಾಟ ಸಮಿತಿಯಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದ್ದೆವು ಎಂದರು.
ಇದೀಗ ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮಹಾನ್ ದಾರ್ಶನಿಕರಿಗೆ ಹಿಂದಿನ ಸರ್ಕಾರದ ಪಠ್ಯಪರಿಷ್ಕರಣ ಸಮಿತಿ ಮಾಡಿದ ಅಪಮಾನವನ್ನು ಸರಿಪಡಿಸಬೇಕಿದೆ. ಹೀಗಾಗಿ ಈ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಪರಿಷ್ಕರಣೆಯನ್ನೇ ಮುಂದುವರಿಸಬೇಕು. ಮಕ್ಕಳಿಗೆ ಯಾವುದೇ ಕಾರಣಕ್ಕೂ ಕೋಮು ಸೌಹಾರ್ದತೆಗೆ ಧಕ್ಕೆ ಬರುವಂತ ಪಠ್ಯಕ್ರಮಗಳನ್ನು ಕೊಡಬಾರದು. ಸರ್ವ ಜನಾಂಗದ ಶಾಂತಿಯ ತೋಟವಾದ ನಮ್ಮ ನಾಡಿನಲ್ಲಿ ಭಾವೈಕ್ಯತೆ ಉಳಿಯುವಂ ಪಠ್ಯಕ್ರಮಗಳನ್ನು ಮುದ್ರಿಸಿ ಕೊಡಬೇಕೆಂದು ಆಗ್ರಹಿಸಿದರು. ಹಿರಿಯ ಸಾಹಿತಿ ಎಲ್.ಎನ್.ಮುಕುಂದರಾಜ್ ಇದ್ದರು.
ಉಡುಪಿ: ಸರಕಾರಿ ಶಾಲೆಯಲ್ಲಿ ಕುಡಿಯಲು ನೀರೇ ಇಲ್ಲ, ಅತಂಕದಲ್ಲಿ ಪೋಷಕರು..!
ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಠ್ಯ ಬದಲು, ಮಕ್ಕಳಿಗೆ ಪಠ್ಯ ತಲುಪಿದೆ, ಈಗ ಪರಿಷ್ಕರಣೆ ಆಗಿಲ್ಲ
ಶಿವಮೊಗ್ಗ: ಮಕ್ಕಳ ಭವಿಷ್ಯ ರೂಪಿಸಬೇಕಾದ ಪಠ್ಯಪುಸ್ತಕದಲ್ಲಿ ಧರ್ಮದ ಬಗ್ಗೆ ವಿಷಬೀಜ ಬಿತ್ತುವಂತಹ ಕೆಲಸ ಹಿಂದಿನ ಸರ್ಕಾರದಲ್ಲಿ ಆಗಿದೆ. ಅವರು ಮಾಡಿದ ತಪ್ಪನ್ನು ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಠ್ಯ ಪುಸ್ತಕವನ್ನು ಬದಲಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆಯನ್ನು ಮಾಡಿಯೇ ಮಾಡುತ್ತೇವೆ. ಬಿಜೆಪಿಯವರು ಬದಲಿಸಿದ್ದಾರೆ ಎಂಬ ಕಾರಣಕ್ಕೆ ಪರಿಷ್ಕರಣೆ ಅಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಪರಿಷ್ಕರಣೆ. ಈ ವರ್ಷ ಈಗಾಗಲೇ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯ ದೊರಕಿದೆ. ಹೀಗಾಗಿ, ಈ ವರ್ಷ ಪಠ್ಯ ಪರಿಷ್ಕರಣೆ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಇನ್ನೂ ಸಮಿತಿ ರಚನೆ ಮಾಡಿಲ್ಲ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವರ ಜೊತೆ ಚರ್ಚೆ ಮಾಡಿದ್ದೇನೆ ಎಂದರು.
Guest Teacher Recruitment: ಪ್ರೌಢ ಶಾಲೆಗಳಿಗೆ 6 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಶಿಕ್ಷಣ ಇಲಾಖೆ
ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ನಾನು ಸಚಿವನಾದ ನಂತರ ಮೊದಲ ಕೆಲಸವೇ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಿರುವುದು. ಸದ್ಯ ಎಲ್ಲಿ ಶಿಕ್ಷಕರ ಕೊರತೆ ಇದೆಯೋ ಅಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಅಧಿಕಾರದಲ್ಲಿದ್ದಾಗ ಬಡವರಿಗೆ ಏನನ್ನೂ ಮಾಡದ ಬಿಜೆಪಿ ಈಗ ಕಾಂಗ್ರೆಸ್‌ನ ಗ್ಯಾರಂಟಿ ವಿರುದ್ಧ ಅಪಪ್ರಚಾರ ಶುರುಮಾಡಿದೆ. ಮಾಡಲು ಏನೂ ಕೆಲಸ ಇಲ್ಲ. ಅವರು ಇನ್ನು ಐದು ವರ್ಷ ಇದೇ ರೀತಿ ಟೀಕೆ ಮಾಡಿಕೊಂಡು ಇರಲಿ ಎಂದರು.