ವಿಶೇಷ ಚೇತನ ವಿದ್ಯಾರ್ಥಿಗೆ ಬಂದಿದ್ದ ಬೆಟ್ಟದಂತಹ ಕಷ್ಟವನ್ನ ರಾತ್ರೋರಾತ್ರಿ ಬಗೆಹರಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್..!
ಪ್ರಕ್ರಿಯೆಯ ಪ್ರಕಾರ, ಪ್ರಾಂಶುಪಾಲರು ಪಿಯು ಶಿಕ್ಷಣದ ಉಪನಿರ್ದೇಶಕರಿಗೆ ಲಿಪಿಕಾರರನ್ನು ಶಿಫಾರಸು ಮಾಡಬೇಕಾಗಿತ್ತು, ಅವರು ಅರ್ಹತೆಯನ್ನು ಪರಿಶೀಲಿಸುತ್ತಾರೆ ಮತ್ತು ನಂತರ ಅನುಮೋದಿಸುತ್ತಾರೆ.
ಬಳ್ಳಾರಿ (ಮಾರ್ಚ್ 22, 2023): 17ರ ಹರೆಯದ ದೃಷ್ಟಿದೋಷವುಳ್ಳ ವಿದ್ಯಾರ್ಥಿಯ ಬದುಕಿನ ದಿಕ್ಕನ್ನು ಸಚಿವರೊಬ್ಬರು ಬದಲಾಯಿಸಿದ್ದಾರೆ. ಇದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಒಳ್ಳೆಯ ನಡೆ ಎಂದು ಹೇಳಬಹುದು. ಭಾನುವಾರ ರಾತ್ರಿ 9.30ಕ್ಕೆ ಬಳ್ಳಾರಿಯ ಎಸ್.ಎನ್. ಪೇಟೆಯ ಅಭಿನವ್ (ಹೆಸರು ಬದಲಿಸಲಾಗಿದೆ) ದ್ವಿತೀಯ ಪಿಯು ಪರೀಕ್ಷೆಯ ಪರಿಷ್ಕರಣೆಯಲ್ಲಿ ನಿರತರಾಗಿದ್ದ. ಮರುದಿನ, ಈ ವಿದ್ಯಾರ್ಥಿ ಇತಿಹಾಸ ಪತ್ರಿಕೆಯನ್ನು ಬರೆಯಬೇಕಾಗಿತ್ತು ಮತ್ತು ಉತ್ತಮ ಅಂಕ ಬರುವ ವಿಶ್ವಾಸವನ್ನೂ ಹೊಂದಿದ್ದನು.
ಆಗ ಅವನ ತಂದೆಗೆ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಸಹಾಯ ಮಾಡುವ ಸ್ಕ್ರೈಬ್ (ಲಿಪಿಕಾರ) ಕುಟುಂಬದಿಂದ ಕರೆ ಬಂದಿದೆ. 22 ವರ್ಷದ ಮಹಿಳೆ ಗರ್ಭಪಾತಕ್ಕೆ ಒಳಗಾಗಿದ್ದು, ಈ ಹಿನ್ನೆಲೆ ಸೋಮವಾರದಂದು ಅಭಿನವ್‌ಗೆ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ ಎಂದು ತಂದೆಗೆ ತಿಳಿಸಿದ್ದಾರೆ. ಹಾಗೂ, ತನ್ನ ಬದಲಾಗಿ ಸ್ಕ್ರೈಬ್ ಆಗುವ ತನ್ನ ಸ್ನೇಹಿತರಿಗೆ ಶಿಫಾರಸು ಮಾಡಬಹುದು ಎಂದೂ ಹೇಳಿದ್ದಾರೆ. ಆದರೆ, ರಾತ್ರೋ ರಾತ್ರಿ ಸ್ಕ್ರೈಬ್ ಬದಲಾಯಿಸೋದು ಕಷ್ಟಸಾಧ್ಯ. ಏಕೆಂದರೆ, ಪಿಯು ಶಿಕ್ಷಣ ಇಲಾಖೆಯು ಹೊಸ ಲಿಪಿಕಾರರನ್ನು ಅನುಮೋದಿಸಬೇಕಾಗಿದೆ.
ಇದನ್ನು ಓದಿ: ಎಕ್ಸಾಂನಲ್ಲಿ ಕಡಿಮೆ ಮಾರ್ಕ್ಸ್ ಭಯ: ಮನೇಲಿ ಬೈತಾರೆಂದು ಲೈಂಗಿಕ ಕಿರುಕುಳದ ಕತೆ ಕಟ್ಟಿದ ಬಾಲಕಿ..!
ಇದರಿಂದ ಗಾಬರಿಗೊಂಡ ಪೋಷಕರು ಅಭಿನವ್ ಪಿಯು ಕಾಲೇಜು ಪ್ರಾಂಶುಪಾಲರ ಮನೆಗೆ ಹೋಗಿದ್ದಾರೆ. ಪ್ರಕ್ರಿಯೆಯ ಪ್ರಕಾರ, ಪ್ರಾಂಶುಪಾಲರು ಪಿಯು ಶಿಕ್ಷಣದ ಉಪನಿರ್ದೇಶಕರಿಗೆ ಲಿಪಿಕಾರರನ್ನು ಶಿಫಾರಸು ಮಾಡಬೇಕಾಗಿತ್ತು, ಅವರು ಅರ್ಹತೆಯನ್ನು ಪರಿಶೀಲಿಸುತ್ತಾರೆ ಮತ್ತು ನಂತರ ಅನುಮೋದಿಸುತ್ತಾರೆ. ನಂತರ, ಪ್ರಾಂಶುಪಾಲರು ಡಿಡಿಪಿಯುಗೆ ಕರೆ ಮಾಡಿದರೂ, ಅವರು ಇದು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ, ಸಮಯ ತೆಗೆದುಕೊಳ್ಳುತ್ತದೆ ಮತ್ತು ರಾತ್ರೋರಾತ್ರಿ ಮಾಡಲು ಸಾಧ್ಯವಿಲ್ಲ ಎಂದು ಡಿಡಿಪಿಯು ಪ್ರಾಂಶುಪಾಲರಿಗೆ ಹೇಳಿದ್ದಾರೆಂದು ತಿಳಿದುಬಂದಿದೆ.
ಇದರಿಂದ ನನ್ನ ಮಗ ಖಿನ್ನತೆಗೆ ಒಳಗಾಗುತ್ತಾನೆ ಎಂದು ನನಗೆ ಖಚಿತವಾಗಿತ್ತು. ಅವನು ಒಂದು ಪರೀಕ್ಷೆಯನ್ನು ತಪ್ಪಿಸಿಕೊಂಡರೂ, ಇಡೀ ವರ್ಷವನ್ನು ಕಳೆದುಕೊಳ್ಳುತ್ತಾನೆ ಎಂದು ಹುಡುಗನ ತಾಯಿ ಹೇಳಿಕೊಂಡಿದ್ದಾರೆ. ಬಳಿಕ, ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರ ಸಂಪರ್ಕ ಸಂಖ್ಯೆ ಇದೆ ಎಂದು ವಿದ್ಯಾರ್ಥಿಯ ತಂದೆ ನೆನಪಿಸಿಕೊಂಡರು. ಆಗ ರಾತ್ರಿ 11.30 ಆಗಿತ್ತು. ಆದರೆ ನಾನು ಹತಾಶನಾಗಿದ್ದೆ ಮತ್ತು ಸಚಿವರಿಗೆ ಕರೆ ಮಾಡಲು ನಿರ್ಧರಿಸಿದೆ ಎಂದು ತಂದೆ ಮಾಧ್ಯಮಕ್ಕೆ ಹೇಳಿದರು.
ಇದನ್ನೂ ಓದಿ: ನಲ್ಲಿ ಕಳ್ಳರ ಹಿಡಿಯೋಕೆ ಟಾಯ್ಲೆಟ್‌ನೊಳಗೆ ಸಿಸಿ ಕ್ಯಾಮೆರಾ ಅಳವಡಿಸಿದ ಕಾಲೇಜು: ವಿದ್ಯಾರ್ಥಿಗಳ ಪ್ರತಿಭಟನೆ
ಮಧ್ಯರಾತ್ರಿ ಹತ್ತಿರವಾಗುತ್ತಿತ್ತು. ಆ ಸಮಯದಲ್ಲೂ ಸಚಿವರೇ ಕರೆಯನ್ನು ಉತ್ತರಿಸಿದರು.. ನಾನು ಸಾಮಾನ್ಯ ಮನುಷ್ಯ, ಪೋಷಕರು ಎಂದು ನಾನು ಅವರಿಗೆ ಹೇಳಿದೆ. ಸಚಿವರು ಆರಂಭದಲ್ಲಿ ಕೋಪಗೊಂಡರು ಮತ್ತು ಸಮಯ ಎಷ್ಟು ಮತ್ತು ಯಾರಿಗಾದರೂ ಕರೆ ಮಾಡಲು ಇದು ಸರಿಯಾದ ಸಮಯವೇ ಎಂದು ನಿಮಗೆ ತಿಳಿದಿದೆಯೇ ಎಂದು ಕೇಳಿದರು. ಬಳಿಕ, ನಾನು ಮರುದಿನ ಪರೀಕ್ಷೆ ಬರೆಯಲಿರುವ ವಿಶೇಷ ಚೇತನ ವಿದ್ಯಾರ್ಥಿಯ ಪೋಷಕರಾಗಿದ್ದೇನೆ ಎಂದ ತಕ್ಷಣ ಸಚಿವರು ಶಾಂತರಾದರು ಎಂದೂ ತಂದೆ ವಿವರಿಸಿದರು.
ಮುಂದೆ ನಡೆದದ್ದು ಕನಸಿನಂತೆ. ಸಚಿವರು ತಾಳ್ಮೆಯಿಂದ ನನ್ನ ಮಾತನ್ನು ಆಲಿಸಿದರು. ನಾವು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಸ್ಥಳೀಯ ಅಧಿಕಾರಿಗಳು ಸಹಾಯ ಮಾಡಲಿಲ್ಲ ಎಂದು ನಾನು ಅವರಿಗೆ ಹೇಳಿದೆ. ಅವರು ತಕ್ಷಣವೇ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯ ಪರೀಕ್ಷಾ ನಿರ್ದೇಶಕರಿಗೆ ಕರೆ ಮಾಡಿದರು. ಅಲ್ಲದೆ, ಅವರು ನನಗೆ ನಿರ್ದೇಶಕರ ಫೋನ್ ಸಂಖ್ಯೆಯನ್ನು ಮೆಸೇಜ್ ಮಾಡಿ ಅವರನ್ನು ಸಂಪರ್ಕಿಸಿ ಎಂದು ಹೇಳಿದರು. ಅಲ್ಲದೆ, ಅವರು ನೇರವಾಗಿ ಪ್ರಾಂಶುಪಾಲರೊಂದಿಗೆ ಮಾತನಾಡಿದರು ಮತ್ತು ನಮಗೆ ಸಹಾಯ ಮಾಡಲು ಸೂಚಿಸಿದರು ಎಂದೂ ವಿದ್ಯಾರ್ಥಿಯ ತಂದೆ ಹೇಳಿದ್ದಾರೆ.
ಇದನ್ನೂ ಓದಿ: ನಾನು ಸತ್ತ ಮೇಲಾದ್ರೂ ಕಾಮ ಪಿಶಾಚಿಗಳನ್ನು ಶಿಕ್ಷಿಸಿ ಎಂದು ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡ್ಕೊಂಡ ವಿದ್ಯಾರ್ಥಿನಿ
ಹಾಗೂ, ಕೆಎಸ್‌ಇಎಬಿ ನಿರ್ದೇಶಕ ಗೋಪಾಲಕೃಷ್ಣ ಅವರಿಗೆ ಕರೆ ಮಾಡಿದೆವು. ಅವರು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು. ತಂಡವು ನಸುಕಿನ ಜಾವ 2.30 ರವರೆಗೆ ಕಾನ್ಫರೆನ್ಸ್ ಕರೆಗಳಲ್ಲಿ ನಿರತರಾಗಿತ್ತು. ನಂತರ, ಬೆಳಿಗ್ಗೆ 8 ಗಂಟೆಗೆ ಇತರ ವಿಧಿವಿಧಾನಗಳಿಗಾಗಿ ಖಜಾನೆ ಕಚೇರಿಗೆ ಭೇಟಿ ನೀಡುವಂತೆ ಪೋಷಕರು ಮತ್ತು ವಿದ್ಯಾರ್ಥಿಗೆ ತಿಳಿಸಲಾಯಿತು ಎಂದೂ ತಿಳಿದುಬಂದಿದೆ.
ಬಳಿಕ, ಬೆಳಗ್ಗೆ, ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಲಾಯಿತು ಮತ್ತು ಅಭಿನವ್ ಹೊಸ ಸ್ಕ್ರೈಬ್‌ನೊಂದಿಗೆ ಪರೀಕ್ಷೆ ಬರೆದನು ಎಂದೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈಗ ನಾವು ಯೋಚಿಸಿದರೆ, ಮಧ್ಯರಾತ್ರಿ ಒಬ್ಬ ಸಾಮಾನ್ಯ ವ್ಯಕ್ತಿಗೆ ಸಹಾಯ ಮಾಡಲು ಸ್ವತಃ ಮಂತ್ರಿಯೊಬ್ಬರು ಹೆಜ್ಜೆ ಹಾಕಿರುವುದು ನಮಗೆ ಆಶ್ಚರ್ಯವಾಯ್ತು ಎಂದು ತಾಯಿ ಹೇಳಿದರು. ಅವರು ತಮ್ಮ ಹೆಸರು ಹೇಳದಿದ್ದರೂ ಸಚಿವರ ಸಹಾಯದ ಬಗ್ಗೆ ಮಾತ್ರ ತಿಳಿಸಿದರು.