ನಾವು ದೇಶದ ಭವಿಷ್ಯ, ನಿಮಗೆ ಇನ್ನೂ ಅವಕಾಶವಿದೆ: ಸಿಎಂಗೆ ಹಿಜಾಬ್ ಪರ ವಿದ್ಯಾರ್ಥಿನಿ ಟ್ವೀಟ್
* ಬೊಮ್ಮಾಯಿಗೆ ಹಿಜಾಬ್ ಪರ ಹೋರಾಟಗಾರ್ತಿ ಮನವಿ
*ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಟ್ವೀಟ್
* ನಾವು ದೇಶದ ಭವಿಷ್ಯ ಎಂದ ಹಿಜಾಬ್ ಪರ ಹೋರಾಟಗಾರ್ತಿ
ಬೆಂಗಳೂರು, (ಏ.15): ಯಾವುದೇ ಕಾರಣಕ್ಕೂ ಹಿಜಾಬ್(Hijab Row) ಧರಿಸಿ ಪರೀಕ್ಷೆಗೆ ಅವಕಾಶ ಇಲ್ಲ ಎಂದು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರ ಬೆನ್ನಲ್ಲೇ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ(Basavaraj Bommai) ಹಿಜಾಬ್ ಪರ ಹೋರಾಟಗಾರ್ತಿ ಮನವಿ ಮಾಡಿಕೊಂಡಿದ್ದಾಳೆ.
ಹಿಜಾಬ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು (Karnataka High Court Order) ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳ (Student) ಪೈಕಿ ಅಲಿಯಾ ಅಸ್ಸಾದಿ ಎಂಬ ವಿದ್ಯಾರ್ಥಿನಿ ಟ್ವೀಟ್ (Tweet) ಮೂಲಕ ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ದಾಳೆ.
ಇದೇ ತಿಂಗಳ 22ರಿಂದ ದ್ವಿತೀಯ ಪಿಯು ಪರೀಕ್ಷೆಗಳು ಆರಂಭವಾಗಲಿವೆ. ನಮ್ಮ ಭವಿಷ್ಯ ಹಾಳಾಗದಂತೆ ತಡೆಯಲು ಇನ್ನೂ ನಿಮಗೆ ಅವಕಾಶವಿದೆ. ಹಾಗಾಗಿ ನಮಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವ ನಿರ್ಧಾರ ಮಾಡಬೇಕು. ನಾವು ದೇಶದ ಭವಿಷ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
Hijab Row: ದ್ವಿತೀಯ ಪಿಯು ಪರೀಕ್ಷೆಗೂ ಹಿಜಾಬ್ ನಿಷಿದ್ಧ: ನಾಗೇಶ್
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪೈಕಿ ಅಲಿಯಾ ಅಸ್ಸಾದಿ ಕೂಡ ಒಬ್ಬರು. ಇತರ ಅರ್ಜಿದಾರರಲ್ಲಿ ಆಯಿಷಾ ಪಾಲವ್ಕರ್, ಆಯಿಷಾ ಹಜಾರಾ ಅಲ್ಮಾಸ್ ಮತ್ತು ಮುಸ್ಕಾನ್ ಜೈನಾಬ್ ಸೇರಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆಗೂ ಹಿಜಾಬ್ ನಿಷಿದ್ಧ
ಎಸ್‌ಎಸ್‌ಎಲ್‌ಸಿ(SSLC) ಪರೀಕ್ಷೆ ಮಾದರಿಯಲ್ಲೇ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ(PUC) ಪರೀಕ್ಷೆಗೂ ಹಿಜಾಬ್(Hijab) ಸೇರಿದಂತೆ ಯಾವುದೇ ಧರ್ಮ ಸೂಚಕ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ. ಈ ಸಂಬಂಧ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
‘ಹೈಕೋರ್ಟ್(High Court) ತೀರ್ಪಿನ ಅನ್ವಯವೇ ನಾವು ಈ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿರುವ ಸಚಿವರು, ‘ಈಗಾಗಲೇ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇರುವ ಕಾನೂನನ್ನೇ ಏಪ್ರಿಲ್ 22ರಿಂದ ಮೇ 18ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೂ ಅನ್ವಯ ಮಾಡಲಾಗುವುದು’ ಎಂದು ಹೇಳಿದ್ದಾರೆ.
ಪ್ರಾಯೋಗಿಕ ಪರೀಕ್ಷೆ ಬಹಿಷ್ಕರಿಸಿದ್ದ ವಿದ್ಯಾರ್ಥಿನಿಉರಯ
ಕಳೆದ ತಿಂಗಳು ಕರಾವಳಿ ಕರ್ನಾಟಕದ ಉಡುಪಿಯ 40 ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟಿನ ತೀರ್ಪಿನಿಂದ ಬೇಸರಗೊಂಡು ಮೊದಲ ಪದವಿ ಪೂರ್ವ ಪರೀಕ್ಷೆಗೆ ಗೈರುಹಾಜರಾಗಿದ್ದರು. ಪರೀಕ್ಷೆಯಿಂದ ದೂರ ಉಳಿದವರು ತರಗತಿಯಲ್ಲಿ ಹಿಜಾಬ್ ಧರಿಸುವ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ. ಈ ಹಿಂದೆ ಪ್ರಾಯೋಗಿಕ ಪರೀಕ್ಷೆಗಳನ್ನೂ ಬಾಲಕಿಯರು ಬಹಿಷ್ಕರಿಸಿದ್ದರು.
ಹಿಜಾಬ್ ಅರ್ಜಿ ವಜಾಗೊಳಿಸಿದ್ದ ಕೋರ್ಟ್
ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟಿನ ತೀರ್ಪಿನಿಂದ ಹತಾಶರಾಗಿರುವ ಅವರು ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಇದರ ಮೇಲೆ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು. ಜೊತೆಗೆ ನ್ಯಾಯಾಲಯ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿಹಿಡಿದಿತ್ತು. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಉಡುಗೆ ನಿಯಮವನ್ನು ಅನುಸರಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
ಹಿಜಾಬ್‌ನಿಂದ ಹಲವು ಬೆಳವಣಿಗೆಗಳು
ಈ ಹಿಜಾಬ್ ವಿಚಾರವಾಗಿ ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಅಲ್ಲದೇ ಹಿಜಾಬ್ ಗಲಾಟೆಯಿಂದಾಗಿ ಮುಸ್ಲಿಂ ಹಾಗೂ ಹಿಂದೂಗಳ ಮಧ್ಯೆ ಮುಸುಕಿನ ಗುದ್ದಾಟಗಳು ಸಹ ಪ್ರಾರಂಭವಾಗಿವೆ. ಹಿಜಾಬ್ ಪರ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆಗಳಿಗೆ ಹಾಜರಾಗದ ಘಟನೆಗಳು ನಡೆದಿವೆ. ಅಲ್ಲದೇ ಹಿಜಾಬ್‌ನಿಂದ ಇದೀಗ ಮುಸ್ಲಿಂ ವ್ಯಾಪಾರ ವಹಿವಾಟುಗಳಿಗೂ ತೊಂದರೆಗಳಾಗುತ್ತಿವೆ. ಹೈಕೋರ್ಟ್ ತೀರ್ಪು ಉಲ್ಲಂಗಿಸಿದ್ದರಿಂದ ವಿವಿಧ ಜಿಲ್ಲೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಿ ಎನ್ನುವ ಅಭಿಯಾನಗಳು ಸಹ ನಡೆದಿವೆ.