ವೃತ್ತಿಪರ ಕೋರ್ಸ್‌ಗಳಿಂದ 21 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ: ಸಚಿವ ಎಂ.ಸಿ.ಸುಧಾಕರ್
ಗ್ರಾಮೀಣ ಭಾಗದ ಬಡ ಮಕ್ಕಳ ಅನುಕೂಲಕ್ಕಾಗಿ ರಾಜ್ಯದಾದ್ಯಂತ ಸರ್ಕಾರಿ ಕಾಲೇಜುಗಳಲ್ಲಿ ಹೊಸದಾಗಿ ಬೇಡಿಕೆಯುಳ್ಳ ವೃತ್ತಿಪರ ಕೋರ್ಸ್‌ಗಳ ಆರಂಭ ಮಾಡಲಾಗಿದ್ದು, ಇದರಿಂದ 21 ಸಾವಿರ ಮಕ್ಕಳಿಗೆ ಲಾಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಚನ್ನರಾಯಪಟ್ಟಣ (ಸೆ.28): ಗ್ರಾಮೀಣ ಭಾಗದ ಬಡ ಮಕ್ಕಳ ಅನುಕೂಲಕ್ಕಾಗಿ ರಾಜ್ಯದಾದ್ಯಂತ ಸರ್ಕಾರಿ ಕಾಲೇಜುಗಳಲ್ಲಿ ಹೊಸದಾಗಿ ಬೇಡಿಕೆಯುಳ್ಳ ವೃತ್ತಿಪರ ಕೋರ್ಸ್‌ಗಳ ಆರಂಭ ಮಾಡಲಾಗಿದ್ದು, ಇದರಿಂದ 21 ಸಾವಿರ ಮಕ್ಕಳಿಗೆ ಲಾಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ. ಪಕ್ಕದ ಅರಸೀಕೆರೆ ತಾಲೂಕಿನಲ್ಲಿ ನೂತನವಾಗಿ ಪ್ರಾರಂಭ ಮಾಡಲಾಗುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಗುದ್ದಲಿ ಪೂಜೆ ಸಲುವಾಗಿ ಆಗಮಿಸಿದ್ದ ಅವರು, ಮಾರ್ಗ ಮಧ್ಯೆಯ ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಹೊಸದಾಗಿ ಆರಂಭ ಮಾಡಲಾಗಿರುವ ಕೋರ್ಸ್‌ಗಳಲ್ಲಿ ಬಿಸಿಎ ಬಯೋ ಟೆಕ್ನಾಲಜಿ ಸೇರಿದಂತೆ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಉದ್ಯೋಗ ಸಿಗುವ ಹೊಸ ಹೊಸ ಕೋರ್ಸ್‌ಗಳನ್ನು ಆರಂಭ ಮಾಡಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿನ 450 ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು. ಇಲ್ಲಿನ ಸರ್ಕಾರಿ ಕಾಲೇಜಿಗೆ ಬಿಸಿಎ ಕೋರ್ಸ್ ಮಂಜೂರಾತಿ ಅಗದಿರುವುದು ಆಶ್ಚರ್ಯಕರ, ಎಲ್ಲೆಡೆ ಕೋರ್ಸ್ ಆರಂಭಿಸಿರುವಾಗ ಇಲ್ಲದಿರುವುದರ ಕುರಿತು ಗಮನಹರಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಬಿಸಿಎ ಆರಂಭಿಸಲಾಗುವುದು.
ದೇವೇಗೌಡರೇಕೆ ಕಾವೇರಿ ಸಮಸ್ಯೆ ಬಗೆಹರಿಸಲಿಲ್ಲ: ಶಾಸಕ ಬಾಲಕೃಷ್ಣ ಪ್ರಶ್ನೆ?
ಅದೇ ರೀತಿ ಶಾಸಕ ಬಾಲಕೃಷ್ಣರವರು ಎಂ.ಕಾಂ ಸ್ನಾತಕೋತ್ತರ ಪದವಿ ಆರಂಭಿಸುವಂತೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಕಾಲೇಜಿನ ಮೂಲಭೂತ ಸೌಲಭ್ಯಗಳ ಪರಿಶೀಲನೆಗಾಗಿ ಪರಿಣಿತರ ತಂಡವು ಆಗಮಿಸಿ ವರದಿ ಕೊಟ್ಟ ನಂತರ ಎಂಕಾಂ ಕೋಸ್೯ ಆರಂಭಿಸಲಾಗುವುದು ಎಂದ ಅವರು ತಾಲೂಕಿಗೆ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ತೆರೆಯುವಂತೆ ಬೇಡಿಕೆ ಸಲ್ಲಿಸಿದ್ದು, ಈಗಾಗಲೇ ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸೇರಿ 5 ಎಂಜಿನಿಯರಿಂಗ್ ಕಾಲೇಜ್ ಗಳಿದ್ದು, ಅದರಲ್ಲೂ 3 ಸರ್ಕಾರಿ ಕಾಲೇಜುಗಳಿವೆ. ಈ ನಿಟ್ಟಿನಲ್ಲಿ ಚನ್ನರಾಯಪಟ್ಟಣಕ್ಕೆ ಮತ್ತೊಂದು ಇಂಜಿನಿಯರಿಂಗ್ ಕಾಲೇಜು ನೀಡುವುದು ತುಸು ಕಷ್ಟವಾದರೂ ಪರಿಶೀಲನೆ ಮಾಡುವುದಾಗಿ ತಿಳಿಸಿ, ಅರಸೀಕೆರೆಯಲ್ಲಿ ಪಾಲಿಟೆಕ್ನಿಕ್ ಕಾಲೇಜ್ ಆರಂಭವಾಗುತ್ತಿದ್ದು ಇಲ್ಲಿನ ಮಕ್ಕಳು ಅದರ ಲಾಭ ಪಡೆಯುವಂತೆ ತಿಳಿಸಿದರು.
ಶಾಸಕ ಸಿ ಎನ್ ಬಾಲಕೃಷ್ಣ ಮಾತನಾಡಿ, ಇಲ್ಲಿನ ಪದವಿ ಕಾಲೇಜಿನಲ್ಲಿ 1200ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಎರಡು ಬಾರಿ ನ್ಯಾಕ್ ಮಾನ್ಯತೆ ಪಡೆದಿದೆ. ಉತ್ತಮ ಪರಿಸರದಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಉತ್ತಮ ಪಾಠ ಪ್ರವಚನದೊಂದಿಗೆ ಸಾಗುತ್ತಿರುವ ಇರುವ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿದೆ, ಪಿಸಿಎಂಗೆ ಅತಿಥಿ ಉಪನ್ಯಾಸಕರನ್ನು ಆಶ್ರಯಿಸಬೇಕಾಗಿದೆ. ಇಲ್ಲಿದ್ದ ಲೈಬ್ರರಿಯನ್ ಹಾಸನಕ್ಕೆ ವರ್ಗಾವಣೆಗೊಂಡಿದ್ದು, ಸದ್ಯ ಖಾಲಿ ಇರುವ ಹುದ್ದೆಗೆ ವಾರದಲ್ಲಿ ಮೂರು ದಿನ ಅವರನ್ನೆ ಇಲ್ಲಿಗೆ ನಿಯೋಜನೆ ಮಾಡಬೇಕು ಎಂದು ಮನವಿ ಮಾಡಿದರು.
ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳಿದ್ದು, ಕಂಪ್ಯೂಟರ್ ಗಳ ಅವಶ್ಯಕತೆ ಇದ್ದು, ಪೂರೈಕೆಗೆ ಮುಂದಾಗಬೇಕು. ತಾಲೂಕಿಗೆ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜ್ ಗಳ ಆರಂಭಕ್ಕೆ ಬಹು ವರ್ಷಗಳಿಂದಲೂ ಬೇಡಿಕೆ ಇದ್ದು, ಸಚಿವರು ಎರಡರಲ್ಲಿ ಒಂದನ್ನಾದರೂ ತಾಲೂಕಿಗೆ ಮಂಜೂರು ಮಾಡಬೇಕು. ಇದಕ್ಕಾಗಿ 50 ಎಕರೆ ಜಾಗವನ್ನು ಮೀಸಲಿರಿಸಿದ್ದು, ಕಾಲೇಜ್ ಸ್ಥಾಪನೆಗಾಗಿ 5 ಎಕರೆ ಜಾಗವನ್ನು ಉನ್ನತ ಶಿಕ್ಷಣ ಸಚಿವಾಲಯಕ್ಕೆ ವರ್ಗಾವಣೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು, ಪ್ರಾಧ್ಯಾಪಕರು ಇದ್ದರು.
ಡಿ.ಕೆ.ಸಹೋದರರ ದಬ್ಬಾಳಿಕೆಗೆ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ: ಎಚ್‌ಡಿಕೆ
ಶೀಘ್ರ1242 ಹುದ್ದೆ ಭರ್ತಿ: ರಾಜ್ಯದಲ್ಲಿ ಉಪನ್ಯಾಸಕರ ಕೊರತೆಯ ಕುರಿತಾಗಿ ಹೇಳಿದ ಸಚಿವರು, ಈಗಾಗಲೇ ಸಹ ಪ್ರಾಧ್ಯಾಪಕರ ನೇಮಕಾತಿ ವಿಚಾರದಲ್ಲಿ ಕಲ್ಯಾಣ ಕರ್ನಾಟಕದ ಭಾಗಕ್ಕೆ ಮೀಸಲಾತಿ ಸರಿಯಾಗಿ ನಿಗದಿಯಾಗಿಲ್ಲವೆಂದು ಕೋರ್ಟ್‌ನಲ್ಲಿದ್ದ ಕೇಸ್ ಕಳೆದ ವಾರ ಇತ್ಯರ್ಥವಾಗಿದ್ದು, ಶೀಘ್ರ 1242 ಹುದ್ದೆಗಳನ್ನು ಸರ್ಕಾರದ ನಿಯಮಾನುಸಾರ ತುಂಬಲಾಗುವುದು ಎಂದು ಸಚಿವ ಸುಧಾಕರ್ ಹೇಳಿದರು.