ದೇವೇಗೌಡರೇಕೆ ಕಾವೇರಿ ಸಮಸ್ಯೆ ಬಗೆಹರಿಸಲಿಲ್ಲ: ಶಾಸಕ ಬಾಲಕೃಷ್ಣ ಪ್ರಶ್ನೆ?
ದೇವೇಗೌಡರು ಈ ದೇಶದ ಪ್ರಧಾನಮಂತ್ರಿಯಾಗಿ ಒಂದು ವರ್ಷ ಅಧಿಕಾರ ಮಾಡಿದ್ದರಲ್ಲ. ಅದಕ್ಕಿಂತಲೂ ದೊಡ್ಡ ಹುದ್ದೆ ಯಾವುದಿದೆ? ಅವರು ಮನಸ್ಸು ಮಾಡಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಐದೇ ಐದು ನಿಮಿಷ ಯೋಚನೆ ಮಾಡಿದ್ದರೆ ಈ ಸಮಸ್ಯೆ ಅಂದೇ ಪರಿಹಾರವಾಗುತ್ತಿತ್ತು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿಕಾರಿದರು.
ಕುದೂರು (ಸೆ.28): ದೇವೇಗೌಡರು ಈ ದೇಶದ ಪ್ರಧಾನಮಂತ್ರಿಯಾಗಿ ಒಂದು ವರ್ಷ ಅಧಿಕಾರ ಮಾಡಿದ್ದರಲ್ಲ. ಅದಕ್ಕಿಂತಲೂ ದೊಡ್ಡ ಹುದ್ದೆ ಯಾವುದಿದೆ? ಅವರು ಮನಸ್ಸು ಮಾಡಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಐದೇ ಐದು ನಿಮಿಷ ಯೋಚನೆ ಮಾಡಿದ್ದರೆ ಈ ಸಮಸ್ಯೆ ಅಂದೇ ಪರಿಹಾರವಾಗುತ್ತಿತ್ತು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿಕಾರಿದರು. ಕುದೂರು ಹೋಬಳಿ ನಾರಸಂದ್ರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಕಾವೇರಿ ವಿವಾದ ಬಗೆಹರಿಸಬೇಡಿ ಅಂತ ಬಿಜೆಪಿ ಅಥವಾ ಕಾಂಗ್ರೆಸ್ ನವರು ಅಡ್ಡ ಬಂದಿದ್ದರಾ ಎಂದು ಪ್ರಶ್ನಿಸಿದರು.
ಅಧಿಕಾರ ಇದ್ದಾಗ ಅದನ್ನು ಚಲಾಯಿಸುವುದು ಬಿಟ್ಟು ಈಗ ನೀರಿನ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಜೆಡಿಎಸ್ ವರಿಷ್ಟ ದೇವೇಗೌಡ ಅವರನ್ನು ಪ್ರಶ್ನೆ ಮಾಡಿದರು. ಕಾವೇರಿ ನೀರಿನ ವಿಷಯವಾಗಿ ಕರ್ನಾಟಕದ ಸಂಸದರಿಗೆ ಧಮ್ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಮಾತಾಡೋಕೆ ಧೈರ್‍ಯವೂ ಇಲ್ಲ. ಇಲ್ಲಿ ಚಡ್ಡಿ ಮೆರವಣಿಗೆ ಮಾಡುವ ಬದಲು ಪ್ರಧಾನಮಂತ್ರಿಗಳ ಮುಂದೆ ಚಡ್ಡಿ ಮೆರವಣಿಗೆ ಮಾಡಲಿ ಎಂದು ಕಿಡಿಕಾರಿದರು.
ಕಾವೇರಿ ವಿಚಾರದಲ್ಲಿ ನಮ್ಮಲ್ಲಿಯೇ ಒಗ್ಗಟ್ಟಿಲ್ಲ: ಎಚ್.ಡಿ.ದೇವೇಗೌಡ ಬೇಸರ
ರಾಜ್ಯದ ಸಂಸದರು ನದಿ ನೀರಿನ ಹಂಚಿಕೆ ಬಗ್ಗೆ ಮಾತನಾಡದೆ ಮತ್ತೇನು ಇದುವರೆಗೂ ಗೆಣಸು ಕೀಳುತ್ತಿದ್ದಾರಾ? ಇಲ್ಲೆಲ್ಲೋ ಚಡ್ಡಿ ಮೆರವಣಿಗೆ ಮಾಡೋದು ಬಿಟ್ಟು ಮೋದಿಯವರ ಮುಂದೆ ಚಡ್ಡಿ ಮೆರವಣಿಗೆ ಮಾಡಿದರೆ ಲಾಭವಾಗುತ್ತದೆ. ಅದು ಬಿಟ್ಟು ಮಂಡ್ಯದಲ್ಲಿ ಮೆರವಣಿಗೆ ಮಾಡಿದರೆ ಏನು ಲಾಭ ಆಗುತ್ತದೆ. ಸದ್ಯದಲ್ಲಿಯೇ ಸಂಸದರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ. ಬಿಜೆಪಿಯ ನಳಿನ್‌ಕುಮಾರ್ ಕಟಿಲ್ ರವರು ಬಾಯಿಗೆ ಬಂದಂತೆ ಮಾತನಾಡುತ್ತಾರಲ್ಲಾ, ಈಗ ಕಾವೇರಿ ನೀರಿನ ಹಂಚಿಕೆ ವಿಷಯವಾಗಿ ಪ್ರಧಾನಮಂತ್ರಿಗಳ ಮುಂದೆ ಮಾತನಾಡಿ ತಮ್ಮ ಕಾಳಜಿಯನ್ನು ಪ್ರದರ್ಶಿಸಲಿ ಎಂದು ಹೇಳಿದರು.