ಮೌಲ್ಯಾಧಾರಿತ ಶಿಕ್ಷಣವನ್ನು ತಂತ್ರಜ್ಞಾನದಿಂದ ಬೋಧಿಸಲು ಆಗದು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಚಾಟ್ ಜಿಪಿಟಿಯನ್ನು ಶಿಕ್ಷಕ ವೃತ್ತಿ ಸೇರಿದಂತೆ ವಿವಿಧ ಕೆಲಸಗಳಿಗೆ ಪರ್ಯಾಯವಾಗಿ ಬಳಸಬಹುದು ಎಂಬ ಅಭಿಪ್ರಾಯಗಳಿವೆ. ಆದರೆ, ಇದು ಸಾಧ್ಯವಿಲ್ಲ. ಶಿಕ್ಷಕರು ಇನ್ನಷ್ಟು ಪರಿಣಾಮಕಾರಿಯಾಗಿ ಬೋಧಿಸಲು ಇದು ಸಹಾಯ ಮಾಡಬಹುದು ಅಷ್ಟೆ.
ಬೆಂಗಳೂರು (ಏ.08): ‘ಚಾಟ್ ಜಿಪಿಟಿ’ ಶಿಕ್ಷಕರಿಗೆ ಅಥವಾ ಬೋಧಕರಿಗೆ ಪರ್ಯಾಯವಲ್ಲ. ಶಿಕ್ಷಕರು ಇನ್ನಷ್ಟು ಪರಿಣಾಮಕಾರಿಯಾಗಿ ಬೋಧಿಸಲು, ವಿದ್ಯಾರ್ಥಿಗಳು ಇನ್ನಷ್ಟು ಉತ್ತಮವಾಗಿ ಕಲಿಯಲು ಇದು ಸಹಕಾರಿಯಾಗಬಹುದೇ ಹೊರತು ಮೌಲ್ಯಾಧಾರಿತ ಶಿಕ್ಷಣವನ್ನು ಶಿಕ್ಷಕರನ್ನು ಬಿಟ್ಟು ತಂತ್ರಜ್ಞಾನದಿಂದ ಬೋಧಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.
ಆರ್.ವಿ. ಶಿಕ್ಷಣ ಸಂಸ್ಥೆಯು ಜಯನಗರದ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕಾಲೇಜಿನ 50ರ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಾಟ್ ಜಿಪಿಟಿಯನ್ನು ಶಿಕ್ಷಕ ವೃತ್ತಿ ಸೇರಿದಂತೆ ವಿವಿಧ ಕೆಲಸಗಳಿಗೆ ಪರ್ಯಾಯವಾಗಿ ಬಳಸಬಹುದು ಎಂಬ ಅಭಿಪ್ರಾಯಗಳಿವೆ. ಆದರೆ, ಇದು ಸಾಧ್ಯವಿಲ್ಲ. ಶಿಕ್ಷಕರು ಇನ್ನಷ್ಟು ಪರಿಣಾಮಕಾರಿಯಾಗಿ ಬೋಧಿಸಲು ಇದು ಸಹಾಯ ಮಾಡಬಹುದು ಅಷ್ಟೆ. ಆದರೆ, ಮೌಲ್ಯಾಧಾರಿತ ಶಿಕ್ಷಣವನ್ನು ಇಂತಹ ತಂತ್ರಜ್ಞಾನದಿಂದ ಕಲಿಸಲು ಸಾಧ್ಯವಿಲ್ಲ. ಅದು ಶಿಕ್ಷಕರು-ವಿದ್ಯಾರ್ಥಿಗಳ ನಡುವಿನ ಒಡನಾಟದಿಂದ ಮಾತ್ರ ಸಾಧ್ಯ ಎಂದರು.
ಭರವಸೆ ಈಡೇರಿಸಿದ ಇತಿಹಾಸ ಕಾಂಗ್ರೆಸ್ಸಿಗಿಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಶಿಕ್ಷಣದಲ್ಲಿ ಮೌಲ್ಯಗಳು, ನೀತಿ ಪಾಠಗಳು ಇಲ್ಲದೆ ಇದ್ದರೆ ಅದು ಪರಿಪೂರ್ಣ ಶಿಕ್ಷಣವಾಗುವುದಿಲ್ಲ. ಮನುಕುಲ ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಉತ್ತಮ ಮೌಲ್ಯ, ನೀತಿಗಳಿಂದ ಕೂಡಿದ ಶಿಕ್ಷಣ ಸರ್ವಕಾಲಕ್ಕೂ ಅತ್ಯಂತ ಅವಶ್ಯಕ. ಕೇವಲ ಉತ್ತೀರ್ಣಕ್ಕಾಗಿ, ಅಂಕಗಳಿಗಾಗಿ ಪಠ್ಯ ಪುಸ್ತಕ ಓದಿ ಪದವಿ ಪಡೆಯುವುದರಿಂದ ವಿದ್ಯಾರ್ಥಿಗಳು ಪರಿಪೂರ್ಣರಾಗುವುದಿಲ್ಲ. ಸತ್ಯ, ಧರ್ಮ, ನ್ಯಾಯ, ಅಹಿಂಸೆ, ಪರೋಪಕಾರ ಸೇರಿದಂತೆ ಎಲ್ಲ ರೀತಿಯ ಉತ್ತಮ ಮೌಲ್ಯ, ನೀತಿಗಳ ಪಾಠಗಳನ್ನೂ ವಿದ್ಯಾರ್ಥಿಗಳು ಓದಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ.
ದೇವೇಗೌಡರೇ ನಮಗೆ ಸ್ಟಾರ್ ಪ್ರಚಾರಕರು: ನಿಖಿಲ್ ಕುಮಾರಸ್ವಾಮಿ
ಇಂತಹ ಶಿಕ್ಷಣ ವ್ಯವಸ್ಥೆಗೆ ಬಿಜೆಪಿ ಒತ್ತು ನೀಡುತ್ತಿದೆ. ಇದನ್ನು ಯಾರೂ ವಿರೋಧಿಸಬಾರದು. ಇಂತಹ ಶಿಕ್ಷಣವನ್ನು ಯಾವುದೇ ಪಕ್ಷ ಅನುಷ್ಠಾನಕ್ಕೆ ತಂದರೂ ಎಲ್ಲರೂ ಸ್ವಾಗತಿಸಬೇಕು ಎಂದರು. ಇದೇ ವೇಳೆ ನಿರ್ಮಲಾ ಸೀತಾರಾಮನ್ ಅವರು ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಜಿಮ್ ಅನ್ನು ಉದ್ಘಾಟಿಸಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಆರ್.ವಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಪಿ.ಶ್ಯಾಮ್, ಗೌರವ ಕಾರ್ಯದರ್ಶಿ ಎ.ವಿ.ಎಸ್.ಮೂರ್ತಿ, ಗೌರವ ಜಂಟಿ ಕಾರ್ಯದರ್ಶಿ ಡಿ.ಪಿ.ನಾಗರಾಜ್, ಎನ್‌ಎಂಕೆಆರ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸ್ನೇಹಲತಾ ಜಿ.ನಾಡಿಗೇರ್ ಇತರರು ಇದ್ದರು.