ಭರವಸೆ ಈಡೇರಿಸಿದ ಇತಿಹಾಸ ಕಾಂಗ್ರೆಸ್ಸಿಗಿಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
‘ನೀಡಿರುವ ಭರವಸೆಗಳನ್ನು ಈಡೇರಿಸಿದ ಇತಿಹಾಸವೇ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಚಿತ ಭರವಸೆಗಳನ್ನು ಆ ಪಕ್ಷ ನೀಡುತ್ತಿದೆ. ಕಾಂಗ್ರೆಸ್‌ನ ಭರವಸೆ ನಂಬಬೇಡಿ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೆಂಗಳೂರು (ಏ.07): ‘ನೀಡಿರುವ ಭರವಸೆಗಳನ್ನು ಈಡೇರಿಸಿದ ಇತಿಹಾಸವೇ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಚಿತ ಭರವಸೆಗಳನ್ನು ಆ ಪಕ್ಷ ನೀಡುತ್ತಿದೆ. ಕಾಂಗ್ರೆಸ್‌ನ ಭರವಸೆ ನಂಬಬೇಡಿ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಗುರುವಾರ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಸಾಕಷ್ಟುಆಶ್ವಾಸನೆಗಳನ್ನು ಕಾಂಗ್ರೆಸ್ ನೀಡಿತ್ತು. ಆದರೆ, ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿವೆ ಎಂದು ಲೇವಡಿ ಮಾಡಿದರು.
ಚುನಾವಣೆ ಹಿನ್ನೆಲೆಯಲ್ಲಿ ಕಾಂಗೆಸ್ ಪಕ್ಷವು ಮಹಿಳೆಯರಿಗೆ ಎರಡು ಸಾವಿರ ರು., 200 ಯೂನಿಟ್ ಉಚಿತ ವಿದ್ಯುತ್, ಯುವಕರಿಗೆ ಎರಡು ಸಾವಿರ ರು. ನೀಡುವ ಆಶ್ವಾಸನೆ ನೀಡಿದೆ. ಕರ್ನಾಟಕದ ಬಜೆಟ್ ಮೂರು ಲಕ್ಷ ಕೋಟಿ ರು. ಇದೆ. ಕಾಂಗ್ರೆಸ್ ನೀಡಿರುವ ಭರವಸೆ ಈಡೇರಿಕೆಗೆ ಒಂದು ಲಕ್ಷ ಕೋಟಿ ರು. ಬೇಕು. ಉಳಿದ ಎರಡು ಲಕ್ಷ ಕೋಟಿ ರು.ನಲ್ಲಿ ಸರ್ಕಾರ ನಡೆಸಬೇಕು. ರಾಜ್ಯದ ಜನರನ್ನು ಉಳಿದ ಹಣದಲ್ಲಿ ಹೇಗೆ ನಡೆಸಿಕೊಳ್ಳಲಿದೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಕರ್ನಾಟಕಕ್ಕೂ, ಬಿಜೆಪಿಗೆ ಅವಿನಾಭಾವ ಸಂಬಂಧ ಇದೆ. ಅದರಲ್ಲೂ ಬೆಂಗಳೂರು ಜತೆಗೆ ದಶಕಗಳಿಂದ ಭಾವನಾತ್ಮಕ ಸಂಬಂಧವಿದೆ.
ರಾಜ್ಯದ ಒಳಮೀಸಲಾತಿಯಿಂದ ದೇಶದಲ್ಲಿ ದೊಡ್ಡ ಬದಲಾವಣೆ: ಸಿಎಂ ಬೊಮ್ಮಾಯಿ
1975ರಲ್ಲಿ ಪ್ರಜಾಪ್ರಭುತ್ವದ ಮೇಲೆ ತುರ್ತು ಪರಿಸ್ಥಿತಿ ಮೂಲಕ ಭಯಾನಕ ದಾಳಿ ನಡೆಸಲಾಯಿತು. ಪಕ್ಷದ ಹಿರಿಯ ಮುಖಂಡರಾದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಇದೇ ಬೆಂಗಳೂರಿನಲ್ಲಿ ಬಂಧಿಸಿಡಲಾಗಿತ್ತು ಎಂದರು. ಚುನಾವಣಾ ವೇಳೆಯಲ್ಲಿ ಮಾತ್ರ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡುತ್ತದೆ ಎಂಬುದು ಸುಳ್ಳು. ಅಭಿವೃದ್ಧಿಗೆ ಯಾವಾಗಲೂ ಬಿಜೆಪಿ ಒತ್ತು ನೀಡುತ್ತದೆ. 2014ರಿಂದ ಈವರೆಗೆ ಕೋಟ್ಯಂತರ ರು.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ರೈಲ್ವೆ ಡಬ್ಲಿಂಗ್ ಮಾಡಲಾಗಿದೆ ಮತ್ತು ನಿಲ್ದಾಣಗಳನ್ನು ನಿರ್ಮಿಸಿ ಆಧುನೀಕರಣಗೊಳಿಸಲಾಗಿದೆ. ಸಿದ್ಧಾರೂಢ ರೈಲ್ವೆ ನಿಲ್ದಾಣದಲ್ಲಿ 1,517 ಮೀಟರ್ ರೈಲ್ವೆ ಪ್ಲಾಟ್‌ಫಾರಂ ಉದ್ಘಾಟಿಸಲಾಗಿದ್ದು, ಇದು ಗಿನ್ನಿಸ್ ದಾಖಲೆ ಕೂಡ ಆಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಪೂರೈಕೆ ಕಾರ್ಯ ನಡೆಯುತ್ತಿದೆ. ಪ್ರತಿ ಸಿಲಿಂಡರ್‌ಗೆ 200 ರು. ಸಬ್ಸಿಡಿ ನೀಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಸೇರಿ ಒಂದು ಲಕ್ಷ ಕೋಟಿ ರು. ಮೊತ್ತದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದೆ.
2009-14ರ ನಡುವೆ ರಾಜ್ಯದ ರೈಲ್ವೆ ಕಾಮಗಾರಿಗಳಿಗೆ 835 ಕೋಟಿ ರು. ಅನುದಾನ ನೀಡಿದರೆ, ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕ ಈವರೆಗೆ ರೈಲ್ವೆ ಯೋಜನೆಗಾಗಿ 7561 ಕೋಟಿ ರು. ನೀಡಲಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾಡಲಾಗಿದ್ದು, ಮೈಸೂರು-ಕುಶಾಲನಗರ ನಡುವೆ 4,113 ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಲಿದೆ ಎಂದರು. ಉದ್ಯಮಿ ಅದಾನಿ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಆರೋಪವು ನಿರಾಧಾರವಾಗಿದೆ. ಈ ವಿಚಾರದಲ್ಲಿ ಸತ್ಯಕ್ಕೆ ದೂರವಾದ ಆರೋಪ ಮಾಡಲಾಗುತ್ತಿದೆ.
ಮೋದಿ ಅದಾನಿ ಭಾಯ್ ಭಾಯ್ ಎನ್ನುವವರು ರಾಜಸ್ಥಾನದಲ್ಲಿ ಯಾಕೆ ಟೆಂಡರ್ ಮಾಡಲಿಲ್ಲ. ಮೊದಲು ಈ ಕೆಲಸ ಮಾಡಿ ಎಂದು ಸವಾಲು ಹಾಕಿದ ಅವರು, ರಫೇಲ್ ವಿಚಾರದಲ್ಲಿ ಆಧಾರ ರಹಿತ ಆರೋಪ ಮಾಡಿ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ಕ್ಷಮಾಪಣೆ ಕೇಳಿದ್ದರು ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
'ಮೋದಿ, ನಿನ್ನ ಗೋರಿ ತೋಡ್ತೇವೆ ಅಂತಾರೆ: ಬಿಜೆಪಿ ಯಶಸ್ಸಿನಿಂದ ಕಾಂಗ್ರೆಸ್ ತೀವ್ರ ಹತಾಶ
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. 2015ರಿಂದ ಈವರೆಗೆ 32 ಬಾರಿ ರಾಜ್ಯಕ್ಕೆ ಬಂದಿದ್ದಾರೆ. 2023ರಲ್ಲಿಯೇ ಏಳು ಬಾರಿ ಆಗಮಿಸಿದ್ದು, ಇದೇ ತಿಂಗಳು ಮತ್ತೊಮ್ಮೆ ಬರುವ ಮೂಲಕ ಒಟ್ಟು ಎಂಟು ಬಾರಿ ಬಂದಂತಾಗಿದೆ. ಯಾವುದೇ ಪ್ರಧಾನಿ ಇಷ್ಟೊಂದು ಬಾರಿ ರಾಜ್ಯಗಳಿಗೆ ಭೇಟಿ ನೀಡಿರುವ ಉದಾಹರಣೆ ಇಲ್ಲ.
-ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ