ವಿದ್ಯಾರ್ಥಿ ವೇತನ ಅರ್ಜಿ ಹಾಕಲು ತೆರೆದುಕೊಳ್ಳದ ವೆಬ್‌ಸೈಟ್‌ ಸಮಾಜ ಕಲ್ಯಾಣ ಇಲಾಖೆಯಡಿ ವಿದ್ಯಾರ್ಥಿಗಳಿಗೆ ಸಮಸ್ಯೆ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಫೆ.28 ಕೊನೆ ದಿನ ಆಧಾರ ಕಾರ್ಡ್‌ ತಿದ್ದುಪಡಿಗಿಲ್ಲ ಅವಕಾಶ

ಸೋಮರಡ್ಡಿ ಅಳವಂಡಿ

ಕೊಪ್ಪಳ (ಫೆ.22) : ಬಿಇಡಿ ಸೇರಿದಂತೆ ಪದವಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಕಳೆದ ಆರು ತಿಂಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ವೆಬ್‌ಸೈಟ್‌ ತೆರೆದುಕೊಳ್ಳುತ್ತಲೇ ಇಲ್ಲ. ಸ್ಥಳೀಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ.

ಸಮಾಜ ಕಲ್ಯಾಣ ಇಲಾಖೆ(Department of Social Welfare) ವ್ಯಾಪ್ತಿಯಲ್ಲಿ ಎಸ್ಸಿ, ಎಸ್ಟಿವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ(scholarship) ಪಡೆಯಲು ಆನ್‌ಲೈನ್‌ ಅರ್ಜಿ(online apply) ಸಲ್ಲಿಸಬೇಕು. ಬಿಇಡಿ ಸೇರಿದಂತೆ ಪದವಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದಕ್ಕೆ ಅವಕಾಶವೇ ದೊರೆಯುತ್ತಿಲ್ಲ.

Scholarship: ಇಲ್ಲಿದೆ ಪ್ರಮುಖ ಸ್ಕಾಲರ್‌ಶಿಪ್‌ಗಳ ವಿವರ ....!

ಪ್ರಾರಂಭದಲ್ಲಿ ವೆಬ್‌ಸೈಟ್‌(website) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಧಾರ ಕಾರ್ಡ್‌ ಮತ್ತು ಅಂಕಪಟ್ಟಿ(Adhar card and marks card)ಯಲ್ಲಿ ಹೆಸರು ಸರಿಯಾಗಿ ಹೊಂದಾಣಿಕೆಯಾದರೆ ಮಾತ್ರ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಾಗುತ್ತಿತ್ತು. ಈ ಸಮಸ್ಯೆ ಅನೇಕ ವಿದ್ಯಾರ್ಥಿಗಳು ಎದುರಿಸುತ್ತಿದ್ದರು. ಹೀಗಾಗಿ,ಆಧಾರ್‌ ಕಾರ್ಡ್‌ ತಿದ್ದುಪಡಿ ಸೇರಿದಂತೆ ಅಂಕಪಟ್ಟಿಯಲ್ಲಿ ಸ್ಪೆಲಿಂಗ್‌ ದೋಷ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಯಿತು. ಈಗ ಸರಿಪಡಿಸಿಕೊಂಡು ಅರ್ಜಿ ಸಲ್ಲಿಸಲು ಹೋದರು ವೆಬ್‌ಸೈಟ್‌ ತೆರೆದುಕೊಳ್ಳುತ್ತಿಲ್ಲ.

ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿನವಾಗಿದ್ದು, ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಿದರೆ ದೊರೆಯುವ ವಿದ್ಯಾರ್ಥಿ ವೇತನದಿಂದ ಪರೀಕ್ಷಾ ಶುಲ್ಕ ಪಾವತಿ ಸೇರಿದಂತೆ ಮೊದಲಾದ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗುತ್ತದೆ. ಆದರೆ, ಅರ್ಜಿ ಸಲ್ಲಿಸುವುದಕ್ಕೆ ಆಗದೇ ಇರುವುದು ತೀವ್ರ ಸಮಸ್ಯೆಯಾಗಿದೆ.

ತಿದ್ದುಪಡಿಗಿಲ್ಲ ಅವಕಾಶ:

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತಿದ್ದುಪಡಿಗೆ ಅವಕಾಶವನ್ನೇ ನೀಡಿಲ್ಲ. ಈ ಮೊದಲು ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿ, ಆಗ ಆಧಾರ ಕಾರ್ಡ್‌ ಮತ್ತು ಅಂಕಪಟ್ಟಿಯಲ್ಲಿ ಹೆಸರು ಸೇರಿದಂತೆ ವಿಳಾಸ ಹೊಂದಾಣಿಕೆ ಇಲ್ಲದೆ ಅರ್ಜಿ ತಿರಸ್ಕೃತವಾಗಿದೆ. ಎಲ್ಲವೂ ಸರಿಯಾಗಿದ್ದ ಅರ್ಜಿಯನ್ನು ಮಾತ್ರ ಸ್ವೀಕಾರ ಮಾಡಿದೆ. ಆದರೆ, ತಿರಸ್ಕಾರವಾಗಿರುವ ಅರ್ಜಿಗಳನ್ನು ತಿದ್ದುಪಡಿಯೊಂದಿಗೆ ಸಲ್ಲಿಸುವುದಕ್ಕೆ ವೆಬ್‌ಸೈಟ್‌ನಲ್ಲಿ ಅವಕಾಶವೇ ಇಲ್ಲ. ಎಸ್ಸೆಸ್ಸೆಲ್ಸಿ ವೇಳೆಯಲ್ಲಿ ನೋಂದಣಿ ಮಾಡಿಕೊಂಡ ಹೆಸರು ಮತ್ತು ಆಧಾರ ಕಾರ್ಡ್‌ನಲ್ಲಿ ಹೆಸರು ಸರಿಯಾಗಿಲ್ಲದ ಕಾರಣ ತಿರಸ್ಕಾರ ಮಾಡಲಾಗಿದೆ ಎನ್ನುವ ವೆಬ್‌ಸೈಟ್‌ ತಿದ್ದುಪಡಿ ಮಾಡಿದ ಮೇಲೆ ಅರ್ಜಿಯನ್ನೇ ಸ್ವೀಕಾರ ಮಾಡುತ್ತಿಲ್ಲ.

ಎಸ್ಸಿ-ಎಸ್ಟಿ, ಒಬಿಸಿ 1-8ನೇ ಕ್ಲಾಸ್‌ ಸ್ಕಾಲರ್‌ಶಿಪ್‌ ಸ್ಥಗಿತ: ಸಿದ್ದರಾಮಯ್ಯ ಆಕ್ರೋಶ

ಆಧಾರ್‌ ಕಾರ್ಡ್‌ ಅಥವಾ ಅಂಕಪಟ್ಟಿಯಲ್ಲಿ ನೋಂದಣಿ ಸಂಖ್ಯೆ ಸೇರಿದಂತೆ ಮೊದಲಾದ ತಿದ್ದುಪಡಿ ಮಾಡಿದ ಬಳಿಕ ಅರ್ಜಿ ಸಲ್ಲಿಸಲು ಲಿಂಕ್‌ ಇದೆಯಾದರೂ ಅದು ತೆರೆದುಕೊಳ್ಳುತ್ತಲೇ ಇಲ್ಲ. ಇದು ಕೇವಲ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಅಲ್ಲ, ರಾಜ್ಯಾದ್ಯಂತ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ವಿದ್ಯಾರ್ಥಿ ವೇತನ ಸಲ್ಲಿಸಲು ವೆಬ್‌ಸೈಟ್‌ ತೆರೆದುಕೊಳ್ಳದೆ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.ಸ್ಥಳೀಯ ಅಧಿಕಾರಿಗಳನ್ನು ಕೇಳಿದರೂ ಸ್ಪಂದಿಸುತ್ತಿಲ್ಲ .

ಅಮರೇಶ ಕಡಗದ, ರಾಜ್ಯಾಧ್ಯಕ್ಷರು ಎಸ್‌ಎಫ್‌ಎ ಸಂಘಟನೆ

ನಾನು ಅರ್ಜಿ ಸಲ್ಲಿಸಲು ಕಳೆದೊಂದು ತಿಂಗಳಿಂದ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಸಲ್ಲಿಕೆ ಮಾಡಲು ವೆಬ್‌ಸೈಟ್‌ ತೆರೆದುಕೊಳ್ಳುತ್ತಿಲ್ಲ. ಕೊನೆಯ ದಿನಾಂಕಕ್ಕೆ ಇನ್ನೊಂದು ವಾರ ಬಾಕಿ ಇದ್ದು, ತೀವ್ರ ಸಮಸ್ಯೆಯಾಗಿದೆ.

ಕಾವೇರಿ ಹಿರೇಮಠ ವಿದ್ಯಾರ್ಥಿನಿ