ಎನ್‌ಇಪಿ ರದ್ದು: ಕರ್ನಾಟಕದ ನಿರ್ಧಾರಕ್ಕೆ ಕೇಂದ್ರ ಕಿಡಿ
ಕರ್ನಾಟಕವು, ಅಭಿವೃದ್ಧಿ ಮತ್ತು ಸಮಗ್ರ ಒಳಗೊಳ್ಳುವಿಕೆಯನ್ನು ಬೆಂಬಲಿಸುವ ನಾಯಕತ್ವವನ್ನು ಹೊಂದಲು ಅರ್ಹವಾಗಿದೆಯೇ ಹೊರತೂ ಕ್ಷುಲಕ ರಾಜಕಾರಣ ಮಾಡುವವರನ್ನಲ್ಲ. ಕ್ಷುಲ್ಲಕ ರಾಜಕಾರಣವನ್ನು ಬದಿಗೊತ್ತಿ, ವಿದ್ಯಾರ್ಥಿ ಮೊದಲು ಎಂಬ ನೀತಿಯನ್ನು ಪಾಲಿಸೋಣ ಸಿದ್ದರಾಮಯ್ಯ ಅವರೇ’ ಎಂದು ಪ್ರತಿಕ್ರಿಯಿಸಿದ ಪ್ರಧಾನ್
ನವದೆಹಲಿ(ಆ.18): 2021ರಲ್ಲಿ ಕರ್ನಾಟಕ ಸರ್ಕಾರವು ಅಳವಡಿಸಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಹಿಂಪಡೆಯುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಶಿಕ್ಷಣವು ಅಭಿವೃದ್ಧಿಯ ದಾರಿದೀಪವಾಗಬೇಕೇ ವಿನಃ, ರಾಜಕೀಯದ ದಾಳವಲ್ಲ ಎಂದು ಕೇಂದ್ರ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನ್, ‘ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಹಿಂಪಡೆಯುವ ಕರ್ನಾಟಕ ಮುಖ್ಯಮಂತ್ರಿಗಳ ರಾಜಕೀಯ ಪ್ರೇರಿತ ನಿರ್ಧಾರ ತಿಳಿದು ಬೇಸರವಾಯಿತು. ನಮ್ಮ ಶಿಕ್ಷಣ ವಿಕಸನಗೊಳ್ಳಬೇಕೇ ಹೊರತೂ ಹಿಮ್ಮುಖ ಸಾಗಬಾರದು. ರಾಷ್ಟ್ರೀಯ ಶಿಕ್ಷಣ ನೀತಿಯು, ಎಲ್ಲರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ, ಹಲವು ವರ್ಷಗಳ ಸಮಾಲೋಚನೆಯ ಫಲವಾಗಿತ್ತು. ಹೀಗಿರುವಾಗ ಕರ್ನಾಟಕ ಸರ್ಕಾರದ ನಿರ್ಧಾರವು, ಅಖಿಲ ಭಾರತ ಕಾಂಗ್ರೆಸ್‌ನ ಸುಧಾರಣಾ ವಿರೋಧಿ, ಭಾರತೀಯ ಭಾಷೆಗಳ ವಿರೋಧಿ ಮತ್ತು ಕರ್ನಾಟಕ ವಿರೋಧಿ ಗುಣಲಕ್ಷಣಗಳನ್ನು ತೋರಿಸುತ್ತದೆ’ ಎಂದು ಟೀಕಿಸಿದ್ದಾರೆ.
ಎನ್‌ಇಪಿ ರದ್ದತಿ ನಿರ್ಧಾರ ಕೈಬಿಡಿ, ಇಲ್ಲದಿದ್ರೆ ಹೋರಾಟ: ಬೊಮ್ಮಾಯಿ
ಜೊತೆಗೆ, ‘ಕರ್ನಾಟಕವು, ಅಭಿವೃದ್ಧಿ ಮತ್ತು ಸಮಗ್ರ ಒಳಗೊಳ್ಳುವಿಕೆಯನ್ನು ಬೆಂಬಲಿಸುವ ನಾಯಕತ್ವವನ್ನು ಹೊಂದಲು ಅರ್ಹವಾಗಿದೆಯೇ ಹೊರತೂ ಕ್ಷುಲಕ ರಾಜಕಾರಣ ಮಾಡುವವರನ್ನಲ್ಲ. ಕ್ಷುಲ್ಲಕ ರಾಜಕಾರಣವನ್ನು ಬದಿಗೊತ್ತಿ, ವಿದ್ಯಾರ್ಥಿ ಮೊದಲು ಎಂಬ ನೀತಿಯನ್ನು ಪಾಲಿಸೋಣ ಸಿದ್ದರಾಮಯ್ಯ ಅವರೇ’ ಎಂದು ಪ್ರಧಾನ್ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ಸಂವಿಧಾನಕ್ಕೆ ಅನುಗುಣವಾಗಿಲ್ಲ. ಹೀಗಾಗಿ ಅದನ್ನು ಮುಂದಿನ ವರ್ಷದಿಂದ ಜಾರಿಗೆ ಬರುವಂತೆ ಹಿಂದಕ್ಕೆ ಪಡೆಯಲಾಗುವುದು. ಇಡೀ ದೇಶದಲ್ಲಿ ಎಲ್ಲಿಯೂ ಎನ್‌ಇಪಿ ಜಾರಿಗೊಳಿಸದೇ ಇದ್ದಾಗ ಅದನ್ನು ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿತ್ತು. ಬಿಜೆಪಿಯವರು ಸಂವಿಧಾನ ವಿರೋಧಿ ಮತ್ತು ಮನುವಾದದಲ್ಲಿ ನಂಬಿಕೆ ಹೊಂದಿರುವವರು. ನಾವು ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ನೂತನ ಪಠ್ಯಕ್ರಮ ಜಾರಿಗೆ ತರುತ್ತೇವೆ ಎಂದು ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.