ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ನೂತನ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಸಿದ್ದರಾಮಯ್ಯ ಅವರ 2013-18ರ ಅವಧಿಯ ಸರ್ಕಾರವೇ ಎನ್‌ಇಪಿ ಕರಡಿಗೆ ಒಪ್ಪಿಗೆ ನೀಡಿತ್ತು. ಕರ್ನಾಟಕದ ಶಿಕ್ಷಣ ನೀತಿ ರಚಿಸಿದ್ದ ಕಸ್ತೂರಿರಂಗನ್‌ ಅವರೇ ಇಡೀ ದೇಶದ ಎನ್‌ಇಪಿ ಮಾಡಿದ್ದಾರೆ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು(ಆ.16): ಮಕ್ಕಳ ಭವಿಷ್ಯವನ್ನು ಕಡೆಗಣಿಸಿ ಕೇವಲ ರಾಜಕಾರಣಕ್ಕಾಗಿ ಹೊಸ ಶಿಕ್ಷಣ ನೀತಿ (ಎನ್‌ಇಪಿ) ರದ್ದು ಮಾಡುವುದು ಅಕ್ಷಮ್ಯ ಅಪರಾಧ. ಇದನ್ನು ಪುನರ್‌ ವಿಮರ್ಶೆ ಮಾಡಬೇಕು. ಇಲ್ಲವಾದರೆ, ಪಾಲಕರ, ಶಿಕ್ಷಣ ಸಂಸ್ಥೆಗಳ ಜತೆಗೂಡಿ ಬಿಜೆಪಿ ದೊಡ್ಡ ಆಂದೋಲನ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ನೂತನ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಸಿದ್ದರಾಮಯ್ಯ ಅವರ 2013-18ರ ಅವಧಿಯ ಸರ್ಕಾರವೇ ಎನ್‌ಇಪಿ ಕರಡಿಗೆ ಒಪ್ಪಿಗೆ ನೀಡಿತ್ತು. ಕರ್ನಾಟಕದ ಶಿಕ್ಷಣ ನೀತಿ ರಚಿಸಿದ್ದ ಕಸ್ತೂರಿರಂಗನ್‌ ಅವರೇ ಇಡೀ ದೇಶದ ಎನ್‌ಇಪಿ ಮಾಡಿದ್ದಾರೆ ಎಂದರು.

ಮುಂದಿನ ಶೈಕ್ಷಣಿಕ ವರ್ಷಕ್ಕೆ ಎನ್‌ಇಪಿ ರದ್ದು: ಸಿಎಂ ಸಿದ್ದರಾಮಯ್ಯ

ಎನ್‌ಇಪಿ ರದ್ದು ಮಾಡುವುದು ಮಕ್ಕಳ ಭವಿಷ್ಯದ ಬಗ್ಗೆ ಚೆಲ್ಲಾಟ ಆಡುವುದಾಗಿದೆ. ಇಡೀ ದೇಶದಲ್ಲಿ ಇರುವ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಇಲ್ಲದಿದ್ದರೆ ನಮ್ಮ ಮಕ್ಕಳು ಪೈಪೋಟಿ ಮಾಡುವುದು ಹೇಗೆ? ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಹಳ ದೊಡ್ಡ ಹಿನ್ನಡೆ ಆಗಲಿದೆ. ಸಿದ್ದರಾಮಯ್ಯ ಅವರು ರಾಜಕೀಯ ಕಾಮಾಲೆ ಕಣ್ಣಿನಿಂದ ನೋಡದೆ ಮಕ್ಕಳ ಉಜ್ವಲ ಭವಿಷ್ಯವನ್ನು ನೋಡಬೇಕು. ಈ ವಿಚಾರವನ್ನು ಪುನರ್‌ ವಿಮರ್ಶೆ ಮಾಡಬೇಕು. ಇಲ್ಲವಾದರೆ ಪಾಲಕರು, ಶಿಕ್ಷಣ ಸಂಸ್ಥೆಗಳ ಜತೆಗೂಡಿ ಬಿಜೆಪಿ ದೊಡ್ಡ ಆಂದೋಲನ ಮಾಡುವುದು ಅನಿವಾರ್ಯವಾಗಲಿದೆ ಎಂದು ಬೊಮ್ಮಾಯಿ ಎಚ್ಚರಿಸಿದರು.