ಅನಂತ್ ನಾಗ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ರಾಜ್ಯಪಾಲರು
ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ 2ನೇ ವರ್ಷದ ಘಟಿಕೋತ್ಸವ ಜರುಗಿತು. ಮೂವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಡಾಕ್ಟರೇಟ್ ಸೇರಿದಂತೆ 41 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವಿಸಿದರು.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಬೆಂಗಳೂರು: ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ 2ನೇ ವರ್ಷದ ಘಟಿಕೋತ್ಸವ ಜರುಗಿತು. ಮೂವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಡಾಕ್ಟರೇಟ್ ಸೇರಿದಂತೆ 41 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವಿಸಿದರು. ಕೋಲಾರ ಬೆಂಗಳೂರು ಉತ್ತರ ವಿವಿಯ 2ನೇ ಘಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಸೇರಿದಂತೆ 41 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು. ಕೋಲಾರ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಪದವಿ ಪ್ರದಾನ ಮಾಡಿದರು.
ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ನಟ ಅನಂತ್‌ನಾಗ್ ಈ ಸಮಾರಂಭಕ್ಕೆ ಗೈರಾಗಿದ್ದರು. ಶಹನಾಯಿ ವಾದಕ ಪದ್ಮಶ್ರೀ ಎಸ್.ಬಲ್ಲೇಶ್ ಭಜಂತ್ರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಬೆಂಗಳೂರಿನ ಶರದ್ ಶರ್ಮಗೆ 'ಡಾಕ್ಟರ್ ಆಫ್ ಸೈನ್ಸ್' ಪದವಿ ನೀಡಿ ಗೌರವಿಸಲಾಯಿತು. ಜಯದೇವ ಹೃದ್ರೋಗ, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿವಿಗಳು ಮೌಲ್ಯಯುತ ಶಿಕ್ಷಣ ನೀಡುವ ಕಡೆ ಹೆಚ್ಚು ಒತ್ತು ನೀಡುವಂತೆ ತಾಕೀತು ಮಾಡಿದರು.
ವಿದ್ಯಾರ್ಥಿಗಳಿಗೆ ಆರೋಗ್ಯ ಪ್ರಾಮುಖ್ಯತೆ ಕುರಿತು ತಿಳಿ ಹೇಳಿದರು. ಇನ್ನು ಇದೆ ವೇಳೆ ಮಾತನಾಡಿದ ರಾಜ್ಯಪಾಲರು ರಾಜ್ಯ, ಕೇಂದ್ರದಲ್ಲಿ ಡಿಜಿಟಲೀಕರಣ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಇದು ಬಹಳ ಅನುಕೂಲವಾಗಲಿದೆ ಎಂದರು. ಕರ್ನಾಟಕ ರಾಜ್ಯವೂ ಶಿಕ್ಷಣ ಕ್ಷೇತ್ರದಲ್ಲಿ ಭಾರತದಲ್ಲಿಯೇ ಪ್ರಮುಖ ಸ್ಥಾನದಲ್ಲಿದೆ ಎಂದು ಹೇಳಿದರು.
ಇನ್ನೂ ವಿಶೇಷವಾಗಿ ಘಟಿಕೋತ್ಸವದಲ್ಲಿ 2020-21ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದ 41 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪೋಷಕರ ಮುಂದೆ ಘಟಿಕೋತ್ಸವದಲ್ಲಿ ಹೆಮ್ಮೆಯಿಂದ ಚಿನ್ನದ ಪದಕ ಸ್ವೀಕರಿಸಿದರು. ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಕುಲಸಚಿವರಾದ ಪ್ರೊ.ಡೊಮಿನಿಕ್, ಡಾ.ವೆಂಕಟೇಶಮೂರ್ತಿ, ಜಿಲ್ಲಾಧಿಕಾರಿ ವೆಂಕಟರಾಜಾ, ಎಸ್ಪಿ ದೇವರಾಜ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಚಿತ್ರನಟ ಅನಂತನಾಗ್ ಗೈರು ಎದ್ದು ಕಾಣುತಿತ್ತು.ಇದನ್ನ ಹೊರತುಪಡಿಸಿದಂತೆ 2ನೇ ವರ್ಷದ ಘಟಿಕೋತ್ಸವ ಅಚ್ಚುಕಟ್ಟಾಗಿ ನಡೆದು ಯಶಸ್ವಿಯಾಯಿತು.