ಸರ್ಕಾರದ ಆದೇಶದಂತೆ ಕರ್ನಾಟಕ ಪಠ್ಯ ಪುಸ್ತಕ ಸಂಘವು ಶನಿವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, 2023-24ನೇ ಸಾಲಿಗೆ ವಿಷಯ ತಜ್ಞರು 6 ರಿಂದ 10ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಕೆಲವು ಮಾರ್ಪಾಡುಗಳನ್ನು ಸೂಚಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಬೆಂಗಳೂರು(ಜೂ.18):  ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಪಠ್ಯಪುಸ್ತಕ ಪರಿಷ್ಕರಣೆ ಕೊನೆಗೂ ಅಂತಿಮಗೊಂಡಿದ್ದು ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌, ಚಕ್ರವರ್ತಿ ಸೂಲಿಬೆಲೆ ಅವರ ಪಠ್ಯಕ್ಕೆ ಕೊಕ್‌ ನೀಡಲಾಗಿದೆ.

ಸರ್ಕಾರದ ಆದೇಶದಂತೆ ಕರ್ನಾಟಕ ಪಠ್ಯ ಪುಸ್ತಕ ಸಂಘವು ಶನಿವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ‘2023-24ನೇ ಸಾಲಿಗೆ ವಿಷಯ ತಜ್ಞರು 6 ರಿಂದ 10ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಕೆಲವು ಮಾರ್ಪಾಡುಗಳನ್ನು ಸೂಚಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಸ್ಪಷ್ಟನೆ ನೀಡಿದೆ.

ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ

ಬಿಜೆಪಿ ಅವಧಿಯಲ್ಲಿ ಸೇರ್ಪಡೆ ಮಾಡಿದ್ದ ಪಠ್ಯಗಳನ್ನು ಕೈಬಿಟ್ಟು ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ರೂಪಿಸಿದ್ದ ಪಠ್ಯವನ್ನೇ ಬಹುತೇಕವಾಗಿ ಮುಂದುವರೆಸಲಾಗಿದೆ. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಶಾಲೆಗಳಿಗೆ ಪಠ್ಯ ಪರಿಷ್ಕರಣೆಯನ್ನು ತಿದ್ದೋಲೆ ರೂಪದಲ್ಲಿ ಸಿದ್ಧಪಡಿಸಿ ನೀಡಲಾಗುವುದು. ತಿದ್ದೋಲೆಯ ಸಾಫ್‌್ಟಪ್ರತಿಯನ್ನು ಸಂಘದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ವಿವರಿಸಲಾಗಿದೆ.

ಯಾವು​ದಕ್ಕೆ ಕೊಕ್‌?:

ಬಿಜೆಪಿಯ ತೀವ್ರ ವಿರೋಧದ ನಡುವೆಯೂ 10 ನೇ ತರತಗತಿ ಕನ್ನಡ ಪಠ್ಯವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಕೈಬಿಟ್ಟು ಶಿವಕೋಟ್ಯಾಚಾರ್ಯರ ‘ಸುಕುಮಾರ ಸ್ವಾಮಿಯ ಕಥೆ’ ಸೇರ್ಪಡೆ ಮಾಡಲಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತೀಯ ಅಮರ ಪುತ್ರರು’ ಪಠ್ಯವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.

ಶತಾವಧಾನಿ ಡಾ.ಆರ್‌.ಗಣೇಶ್‌ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಪಠ್ಯಕ್ಕೆ ಬದಲಿಗೆ ಸಾ.ರಾ.ಅಬಬೂಬಕ್ಕರ್‌ ಅವರ ‘ಯುದ್ಧ’ ಪಠ್ಯ ಸೇರ್ಪಡೆ ಮಾಡಲಾಗಿದೆ. ಒಟ್ಟಾರೆ, ಅನುಬಂಧ-1 ರಲ್ಲಿ ಕನ್ನಡದ 9 ಪಠ್ಯ-ಗದ್ಯದಲ್ಲಿ ಹಾಗೂ ಅನುಬಂಧ-2 ರಲ್ಲಿ 9 ಗದ್ಯದಲ್ಲಿ ಬದಲಾವಣೆ ಮಾಡಲಾಗಿದೆ.

ಪಠ್ಯ ಪರಿಷ್ಕರಣೆ ಗೊಂದಲ ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಸಮಾಜ ವಿಜ್ಞಾನದಲ್ಲಿನ ಬದಲಾವಣೆ

6 ನೇ ತರಗತಿ ಸಮಾಜ ವಿಜ್ಞಾನ ಭಾಗ-1 ರಲ್ಲಿ ‘ವೇದಕಾಲದ ಸಂಸ್ಕೃತಿ’, ‘ಹೊಸ ಧರ್ಮಗಳ ಉದಯ’ ಹೊಸ ಅಧ್ಯಾಯ ಸೇರ್ಪಡೆ ಮಾಡಲಾಗಿದೆ. ಭಾಗ-2 ರಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಅಧ್ಯಾಯದ ಜೊತೆಗೆ ‘ಮಾನವ ಹಕ್ಕುಗಳು’ ಎಂಬ ವಿಷಯ ಸೇರ್ಪಡೆ ಮಾಡಲಾಗಿದೆ. 7 ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರಲ್ಲಿ ‘ಮೈಸೂರು ಮತ್ತು ಇತರ ಸಂಸ್ಥಾನಗಳು’ ಎಂಬ ಅಧ್ಯಾಯದ ಜೊತೆಗೆ ಹಲವು ಅಂಶಗಳನ್ನೂ ಸೇರ್ಪಡೆ ಮಾಡಲಾಗಿದೆ.

ಕನ್ನಡದಲ್ಲಿ ಏನೇನು ಬದಲಾವಣೆ?, ತರಗತಿ ಜಾರಿಯಲ್ಲಿದ್ದ ಪಠ್ಯ ಬದಲಾವಣೆ

6 ನಮ್ಮದೇನಿದೆ?-ನಿರ್ಮಲಾ ಸುರತ್ಕಲ್‌ ನೀ ಹೋದ ಮರುದಿನ-ಚೆನ್ನಣ್ಣ ವಾಲೀಕಾರ
7 ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ-ರಮಾನಂದ ಆಚಾರ್ಯ ಸಾವಿತ್ರಿಬಾಯಿ ಫುಲೆ-ಡಾ.ಎಚ್‌.ಎಸ್‌.ಅನುಪಮ
8 ಭೂಕೈಲಾಸ ಪೌರಾಣಿಕ ನಾಟಕ- ನರಸಿಂಹ ಐತಾಳ ಮಗಳಿಗೆ ಬರೆದ ಪತ್ರ- ಜವಾಹರಲಾಲ್‌ ನೆಹರು
10 ನಿಜವಾದ ಆದರ್ಶ ಪುರುಷಯಾರಾಗಬೇಕು?-ಹೆಡಗೇವಾರ್‌ ಸುಕುಮಾರಸ್ವಾಮಿಯ ಕತೆ-ಶಿವಕೋಟ್ಯಾಚಾರ್ಯ
10 ಶ್ರೇಷ್ಠ ಭಾರತೀಯ ಚಿಂತನೆಗಳು-ಆರ್‌.ಗಣೇಶ್‌ ಯುದ್ಧ-ಸಾ.ರಾ.ಅಬೂಬಕ್ಕರ್‌
10 ತಾಯಿ ಭಾರತೀಯ ಅಮರ ಪುತ್ರರು-ಚಕ್ರವರ್ತಿ ಸೂಲಿಬೆಲೆ ಪೂರ್ಣ ಗದ್ಯಕ್ಕೆ ಕೊಕ್‌
10 ವೀರಲವ-ಲಕ್ಷ್ಮೇಶ ಇದೇ ಪಾಠ​ದಲ್ಲಿ ವಾಲ್ಮೀಕಿ ಮಹರ್ಷಿಗಳ ಪರಿಚಯದ ತಿದ್ದುಪಡಿ
8 ಕಾಲವನ್ನು ಗೆದ್ದವರು-ಕೆ.ಟಿ.ಗಟ್ಟಿ ಬ್ಲಡ್‌ ಗ್ರೂಪ್‌-ವಿಜಯಮಾಲಾ ರಂಗನಾಥ್‌
9 ಅಚ್ಚರಿಯ ಜೀವಿ ಇಂಬಳ-ಪಿ.ಸತ್ಯನಾರಾಯಣಭಟ್‌ ಉರುಸುಗಳಲ್ಲಿ ಭಾವೈಕ್ಯತೆ-ದಸ್ತಗೀರ ಅಲ್ಲೀಭಾಯಿ