ಬಡ್ತಿ ಬಳಿಕ ಹೆಚ್ಚುವರಿ ಶಿಕ್ಷಕರ ವರ್ಗಕ್ಕೆ ಶಿಕ್ಷಕರ ಸಂಘ ಆಗ್ರಹ
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ ನಡೆಸದೇ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ವರ್ಗಾವಣೆ ಪ್ರಕ್ರಿಯೆ ನಡೆಸುವುದರಿಂದ ಸಾಕಷ್ಟು ಶಿಕ್ಷಕರು ಬಡ್ತಿ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹೀಗಾಗಿ ಶಿಕ್ಷಣ ಇಲಾಖೆ ತಕ್ಷಣ ಈ ಸಮಸ್ಯೆ ಬಗೆಹರಿಸಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಬೆಂಗಳೂರು (ಜ.17): ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ ನಡೆಸದೇ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ವರ್ಗಾವಣೆ ಪ್ರಕ್ರಿಯೆ ನಡೆಸುವುದರಿಂದ ಸಾಕಷ್ಟು ಶಿಕ್ಷಕರು ಬಡ್ತಿ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹೀಗಾಗಿ ಶಿಕ್ಷಣ ಇಲಾಖೆ ತಕ್ಷಣ ಈ ಸಮಸ್ಯೆ ಬಗೆಹರಿಸಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಬಡ್ತಿ ಪ್ರಕ್ರಿಯೆ ಸ್ಥಗಿತಗೊಳಿಸಲು ಹೊರಡಿಸಿದ್ದ ಪತ್ರವನ್ನೂ ಮುಖ್ಯಕಾರ್ಯದರ್ಶಿ ಅವರು ಹಿಂತೆಗೆದುಕೊಂಡಿದ್ದಾರೆ. ಆದರೆ, ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಬಡ್ತಿ ಪ್ರಕ್ರಿಯೆ ನಡೆಸದೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ವರ್ಗಾವಣೆ ನಡೆಸಲು ಮುಂದಾಗಿರುವುದು ಸರಿಯಲ್ಲ. ಮೊದಲು ಬಡ್ತಿ ಪ್ರಕ್ರಿಯೆ ನಡೆಸಿ ನಂತರ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ವರ್ಗಾವಣೆ ನಡೆಸಬೇಕು ಎಂದು ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಒತ್ತಾಯಿಸಿದ್ದಾರೆ.
ಸಹ ಶಿಕ್ಷಕ ಹುದ್ದೆಯಿಂದ ಮುಖ್ಯ ಶಿಕ್ಷಕ ಹುದ್ದೆಗೆ, ಮುಖ್ಯ ಶಿಕ್ಷಕ ಹುದ್ದೆಯಿಂದ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡದೆ ಕಳೆದ ವರ್ಷದ ದಾಖಲಾತಿಗೆ ಅನುಗುಣವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿರುತ್ತಿರುವುದರಿಂದ ಸುಮಾರು 9000 ಕ್ಕೂ ಹೆಚ್ಚು ಸಹ ಶಿಕ್ಷಕರು ಹೆಚ್ಚುವರಿಯಾಗಿ ಗುರುತಿಸುವ ಸಾಧ್ಯತೆ ಇದೆ. ಮೊದಲ ಬಡ್ತಿ ನೀಡಿದರೆ ಸುಮಾರು 3000 ದಿಂದ 4000 ಸಾವಿರ ಶಿಕ್ಷಕರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.
ತಜ್ಞರ ಜತೆ ಚರ್ಚಿಸಿ ನೂತನ ಶಿಕ್ಷಣ ನೀತಿಯಲ್ಲಿನ ದೋಷ ಸರಿಪಡಿಸಲಿ: ಎಚ್.ಕೆ.ಪಾಟೀಲ್
ಅದೇ ರೀತಿ ಈ ಶೈಕ್ಷಣಿಕ ವರ್ಷಾಂತ್ಯಕ್ಕೆ ಸುಮಾರು 1000ಕ್ಕೂ ಹೆಚ್ಚು ಶಿಕ್ಷಕರು ನಿವೃತ್ತರಾಗಲಿದ್ದಾರೆ. ಬಡ್ತಿ ನೀಡದೆ ವಿಳಂಬ ಮಾಡಿದರೆ ಇದರಲ್ಲಿ ಸಾಕಷ್ಟುಶಿಕ್ಷಕರು ಬಡ್ತಿ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ವರ್ಗಾವಣೆ ನಡೆಸಿದ ಬಳಿಕ ಬಡ್ತಿ ನೀಡಲು ಹೋದರೆ ಜಿಲ್ಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಬಡ್ತಿ ಹುದ್ದೆಗಳಲ್ಲಿ ವ್ಯತ್ಯಾಸವಾಗಿ ಅನ್ಯಾಯವಾಗುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
100 ದಿನಕ್ಕೆ ಕಾಲಿಟ್ಟ ಪಿಂಚಣಿ ವಂಚಿತ ಶಿಕ್ಷಕರ ಪ್ರತಿಭಟನೆ, ಬೇಡಿಕೆ ಈಡೇರಿಸುವರೆಗೂ ಧರಣಿ ಮುಂದುವರಿಕೆ
ಈ ಬಗ್ಗೆ ಹಲವು ಬಾರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಮತ್ತು ಇಲಾಖೆಯ ಅಧಿಕಾರಿಗಳ ಜೊತೆ ಹಲವು ಬಾರಿ ಚರ್ಚೆ ನಡೆಸಿದ್ದರೂ ಪರಿಗಣಿಸದೇ ಇರುವುದು ಶಿಕ್ಷಕ ವರ್ಗದಲ್ಲಿ ತೀವ್ರ ನೋವುಂಟು ಮಾಡಿದೆ. ಈಗಲಾದರೂ ಸಚಿವರು ಹಾಗೂ ಅಧಿಕಾರಿಗಳು ಶಿಕ್ಷಕರ ನ್ಯಾಯಯುತ ಬೇಡಿಕೆಯನ್ನು ಪರಿಗಣಿಸಿ ಮೊದಲು ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಿ ನಂತರ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ವರ್ಗಾವಣೆ ನಡೆಸಬೇಕೆಂದು ಅವರು ಮನವಿ ಮಾಡಿದ್ದಾರೆ.