100 ದಿನಕ್ಕೆ ಕಾಲಿಟ್ಟ ಪಿಂಚಣಿ ವಂಚಿತ ಶಿಕ್ಷಕರ ಪ್ರತಿಭಟನೆ, ಬೇಡಿಕೆ ಈಡೇರಿಸುವರೆಗೂ ಧರಣಿ ಮುಂದುವರಿಕೆ
ನಿಶ್ಚಿತ ಪಿಂಚಣಿ ಮತ್ತು ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಆಗ್ರಹಿಸಿ ‘ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ’ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರಕ್ಕೆ 100ನೇ ದಿನ ಪೂರೈಸಿದೆ.
ಬೆಂಗಳೂರು (ಜ.15): ನಿಶ್ಚಿತ ಪಿಂಚಣಿ ಮತ್ತು ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಆಗ್ರಹಿಸಿ ‘ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ’ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರಕ್ಕೆ 100ನೇ ದಿನ ಪೂರೈಸಿದೆ. ಬೇಡಿಕೆಗಳನ್ನು ಈಡೇರಿಸದ ಹೊರತು ಧರಣಿ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ, 2006ರ ಏಪ್ರಿಲ್ 1ಕ್ಕೂ ಮೊದಲು ನೇಮಕವಾಗಿದ್ದು, ಬಳಿಕ ಅನುದಾನಕ್ಕೊಳಪಟ್ಟನೌಕರರ ಪೂರ್ವದ ಸೇವೆಯನ್ನೂ ಪಿಂಚಣಿಗೆ ಪರಿಗಣಿಸಿ ನಿವೃತ್ತಿಯಾದ ನಂತರ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿ ಮಾಡಬೇಕು. ಈಗಾಗಲೇ ಬರಿಗೈಯಲ್ಲಿ ನಿವೃತ್ತಿಯಾದ 3 ಸಾವಿರಕ್ಕೂ ಅಧಿಕ ನೌಕರ ರಿಗೆ ಹಾಗೂ ನಿಧನ ಹೊಂದಿದವರ ಕುಟುಂಬಗಳಿಗೆ ತಕ್ಷಣ ಯೋಜನೆಯ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಕಾಲೇಜು ಶಿಕ್ಷಣ ಡಿಜಿಟಲೀಕರಣ: ರಾಜ್ಯದ ವಿವಿಗಳು ಅಮೇರಿಕಾದ ಪೆನ್ಸಿಲ್ವೇನಿಯಾ ವಿವಿಯೊಂದಿಗೆ ಒಪ್ಪಂದ
ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ತಾರತಮ್ಯ ಮಾಡದೇ ಅನುದಾನಿತ ನೌಕರರಿಗೂ ನೀಡಬೇಕು. ಅ.7ರಿಂದ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸ್ವಲ್ಪವೂ ಕಾಳಜಿ ವಹಿಸುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಶಿಕ್ಷಕರ ವರ್ಗ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಜ.16ರ ವರೆಗೆ ಹೆಚ್ಚುವರಿ ಶಿಕ್ಷಕರ ದಾಖಲೆಗಳ ಪರಿಶೀಲನೆ
ನೌಕರರು ವೇತಾನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಚ್ ತೀರ್ಪು ನೀಡಿದ್ದರೂ ಸರ್ಕಾರ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.