Asianet Suvarna News Asianet Suvarna News

ಶಿಕ್ಷಕರ ವರ್ಗಾವಣೆ ಕರಡು ನಿಯಮ ಪ್ರಕಟ

* ಮೊದಲು ಕೆಲಸ ಮಾಡುತ್ತಿದ್ದ ತಾಲೂಕು, ಜಿಲ್ಲೆಗೆ 1 ಬಾರಿ ಮಾತ್ರ ವರ್ಗಾವಣೆ
* ಸುಗ್ರೀವಾಜ್ಞೆಗೆ ನಿಯಮಾವಳಿ ರೂಪಿಸಿ ಸರ್ಕಾರದಿಂದ ಅಧಿಸೂಚನೆ ಪ್ರಕಟ
* ಹಿಂದಿನ ಜ್ಯೇಷ್ಠತಾ ಕ್ರಮಾಂಕದಲ್ಲಿಯೇ ಬಾಧಿತ ಶಿಕ್ಷಕರಿಗೆ ಕೌನ್ಸೆಲಿಂಗ್‌ 

Teachers Transfer Draft Rule Publish in Karnataka grg
Author
Bengaluru, First Published Jun 4, 2021, 11:18 AM IST

ಬೆಂಗಳೂರು(ಜೂ.04): ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಶಿಕ್ಷಕರ ವರ್ಗಾವಣೆ ನಿಯಮ ರದ್ದುಪಡಿಸಿದ್ದನ್ನು ಹೈಕೋರ್ಟ್‌ ಎತ್ತಿಹಿಡಿದ ಬಳಿಕ ಶಿಕ್ಷಕರ ವರ್ಗಾವಣೆಗೆ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರ ಇದೀಗ ವರ್ಗಾವಣೆಗೆ ಕರಡು ನಿಯಮಾವಳಿಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಿದೆ.

2019-20ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಗೆ ಒಳಗಾಗಿದ್ದ ಶಿಕ್ಷಕರ ಪೈಕಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅವರು ವರ್ಗಾವಣೆಗೆ ಪೂರ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದ ತಾಲೂಕು ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಅವರು ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಗೆ ಒಂದು ಬಾರಿ ಮಾತ್ರ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಮೊದಲು ವಿಶೇಷ ಕೌನ್ಸೆಲಿಂಗ್‌ ನಡೆಸಬೇಕು. ವಿಶೇಷ ಕೌನ್ಸೆಲಿಂಗ್‌ಗಾಗಿ ಲಭ್ಯವಿರುವ ಖಾಲಿ ಹುದ್ದೆಗಳ ಪಟ್ಟಿಯನ್ನು ಪ್ರಕಟಿಸಬೇಕೆಂದು ಸೂಚಿಸಲಾಗಿದೆ.

ಶಿಕ್ಷಕರ ವರ್ಗಾವಣೆ ಬಗ್ಗೆ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಿಷ್ಟು

2019-20ರಲ್ಲಿ ಕಡ್ಡಾಯ ವರ್ಗಾವಣೆ ನಡೆಸಿದ್ದ ಪ್ರಾಧಿಕಾರಿಯ ಹಂತದಲ್ಲಿಯೇ ವಿಶೇಷ ಕೌನ್ಸೆಲಿಂಗ್‌ ನಡೆಸಬೇಕು. ಇದಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಬೇಕು. ಸ್ವೀಕೃತವಾದ ಅರ್ಜಿಗಳನ್ನು ಆಕ್ಷೇಪಣೆ ಕರೆದು ಅಂತಿಮಗೊಳಿಸಬೇಕು. ಹಿಂದಿನ ಜ್ಯೇಷ್ಠತಾ ಕ್ರಮಾಂಕದಲ್ಲಿಯೇ ಬಾಧಿತ ಶಿಕ್ಷಕರಿಗೆ ಕೌನ್ಸೆಲಿಂಗ್‌ ನಡೆಸಬೇಕು.

ಹೆಚ್ಚುವರಿಗೊಂಡಿರುವ ಪ್ರಕರಣಗಳಲ್ಲಿ ವಲಯು ನಿರ್ಬಂಧ ಇರುವುದಿಲ್ಲ. ಆದರೆ, ಕಡ್ಡಾಯ ವರ್ಗಾವಣೆಗೊಂಡ ಶಿಕ್ಷಕರು ‘ಬಿ’ ಅಥವಾ ‘ಸಿ’ ವಲಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ‘ಬಿ’ ಮತ್ತು ‘ಸಿ’ ವಲಯಗಳಲ್ಲಿ ಯಾವುದೇ ಹುದ್ದೆ ಲಭ್ಯವಿಲ್ಲದೇ ಇದ್ದಲ್ಲಿ ‘ಎ’ ವಲಯದ ಲಭ್ಯ ಶಾಲೆಗಳನ್ನು ಆಯ್ಕೆಗೆ ನೀಡಬಹುದಾಗಿದೆ ಎಂದು ಕರಡು ನಿಯಮಗಳಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:

2020-21ನೇ ಸಾಲಿನ ಶಿಕ್ಷಕರ ವರ್ಗಾವಣೆ ಆದೇಶದಲ್ಲಿ ಸರ್ಕಾರ 2019-20ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಗೊಂಡಿದ್ದ ಶಿಕ್ಷಕರಿಗೆ ವಿಶೇಷ ಆದ್ಯತೆ ಮೇಲೆ ಕೌನ್ಸೆಲಿಂಗ್‌ಗೆ ಅವಕಾಶ ನೀಡಿತ್ತು. ಇದನ್ನು ಕೆಲ ಶಿಕ್ಷಕರು ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರು. ಕೆಎಟಿ, 2019-20ನೇ ಸಾಲಿನ ಹೆಚ್ಚುವರಿ ಶಿಕ್ಷಕರಿಗೆ ಆದ್ಯತೆ ನೀಡಿರುವ ಶಿಕ್ಷಣ ಇಲಾಖೆಯ ಆದೇಶ ನ್ಯಾಯಸಮ್ಮತವಲ್ಲ ಎಂದು ತಿಳಿಸಿ, ಸರ್ಕಾರದ ಆದೇಶ ರದ್ದುಪಡಿಸಿತ್ತು. ಹೈಕೋರ್ಟ್‌ ಕೆಎಟಿ ಆದೇಶವನ್ನು ಎತ್ತಿಹಿಡಿದಿತ್ತು.
 

Follow Us:
Download App:
  • android
  • ios