ಕಡ್ಡಾಯ, ಹೆಚ್ಚುವರಿ ವರ್ಗಾವಣೆಯಾದವರಿಗೆ ಈ ಸಲ ಆದ್ಯತೆ| ಶಿಕ್ಷಕ ಮಿತ್ರ ಆ್ಯಪ್‌ ಮೂಲಕವೇ 72 ಸಾವಿರ ಅರ್ಜಿ ವಿಲೇವಾರಿ|ಕೌನ್ಸೆಲಿಂಗ್‌ ಸೇರಿದಂತೆ ಎಲ್ಲ ವ್ಯವಸ್ಥೆ ಸಂಪೂರ್ಣ ಡಿಜಿಟಲ್‌| ಸುಗ್ರೀವಾಜ್ಞೆಗೆ ಗೌರ್ನರ್‌ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ಪ್ರಕ್ರಿಯೆ ಶುರು| 

ಬೆಂಗಳೂರು(ಮೇ.01): ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು-ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅನುಮೋದನೆ ಸಿಕ್ಕಿರುವುದರಿಂದ ಶೀಘ್ರದಲ್ಲೇ ಶಿಕ್ಷಕರ ವರ್ಗಾವಣೆ ಪ್ರತಿಕ್ರಿಯೆ ಪ್ರಾರಂಭಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.

2019-20ನೇ ಸಾಲಿನಲ್ಲಿ ಕಡ್ಡಾಯ-ಹೆಚ್ಚುವರಿ ವರ್ಗಾವಣೆಗೊಳಗಾದ ಶಿಕ್ಷಕರಿಗೆ ಒಂದು ಬಾರಿ ವಿಶೇಷ ಅವಕಾಶ ನೀಡಬೇಕು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕು ಅಥವಾ ಜಿಲ್ಲೆಯಲ್ಲಿ ಲಭ್ಯವಿರುವ ಹುದ್ದೆಗಳಿಗೆ ಮೊದಲ ಆದ್ಯತೆಯ ವರ್ಗಾವಣೆಗೆ ಅವಕಾಶ ನೀಡಲು ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಶಿಕ್ಷಕರ ವರ್ಗಾವಣೆ : ಸರ್ಕಾರ ಹೈಕೋರ್ಟ್‌ಗೆ

ವರ್ಗಾವಣೆ ಕೋರಿ ಸಲ್ಲಿಕೆಯಾಗಿರುವ ಸುಮಾರು 72 ಸಾವಿರ ಅರ್ಜಿಗಳನ್ನು ‘ಶಿಕ್ಷಕ ಮಿತ್ರ’ ಆ್ಯಪ್‌ ಮೂಲಕವೇ ನಿರ್ವಹಿಸಿ, ಆನ್‌ಲೈನ್‌ ಮೂಲಕವೇ ಕೌನ್ಸೆಲಿಂಗ್‌ ಪ್ರಕ್ರಿಯೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಶಿಕ್ಷಕರು ಭೌತಿಕ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು. ವರ್ಗಾವಣೆ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿರಬೇಕು. ಯಾವುದೇ ದೂರುಗಳು ಬಂದರೂ ಸಮರ್ಪಕವಾಗಿ ನಿರ್ವಹಿಸುವ ಸದೃಢ ವ್ಯವಸ್ಥೆ ಮಾಡಬೇಕು. ಇಡೀ ವರ್ಗಾವಣೆ ಪ್ರಕ್ರಿಯೆ ಕಾಲ ಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.

ಕಡ್ಡಾಯ-ಹೆಚ್ಚುವರಿ ವರ್ಗಾವಣೆಯಿಂದ ಸುಮಾರು ಮೂರೂವರೆ ಸಾವಿರ ಶಿಕ್ಷಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಾನವೀಯ ನೆಲೆಯಲ್ಲಿ ಅವರಿಗೆ ಮತ್ತೊಂದು ಅವಕಾಶ ಕಲ್ಪಿಸಬೇಕಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ನ್ಯಾಯಾಲಯದ ಆದೇಶ ಅನುಸರಿಸುವ, ಶಿಕ್ಷಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಸುಗ್ರೀವಾಜ್ಞೆ ಹೊರಡಿಸಲು ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಕ ಸಮುದಾಯ ಸರ್ಕಾರದ ಈ ಕಾಳಜಿಯನ್ನು ಅರ್ಥೈಸಿಕೊಂಡು ವರ್ಗಾವಣೆ ಪ್ರಕ್ರಿಯೆಯನ್ನು ಯಾವುದೇ ಅಡೆತಡೆಗಳು ಇಲ್ಲದೆ ಪೂರ್ಣಗೊಳಿಸಲು ಸಹಕಾರ ನೀಡಬೇಕು. ಶಿಕ್ಷಕರ ಸಂಘಟನೆಗಳು ಸರ್ಕಾರದ ನಿಲುವನ್ನು ಎಲ್ಲ ಶಿಕ್ಷಕರಿಗೆ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.