Bangalore University: ಬೆಂಗಳೂರು ವಿವಿ ಫೈಟ್‌ ಗೌರ್ನರ್‌ ಅಂಗಳಕ್ಕೆ..!

*   ಸಂಖ್ಯಾ ಬಲ ಇಲ್ಲದಿದ್ದರೂ ಸಿಂಡಿಕೇಟ್‌ ಸಭೆ ನಡೆಸಿ ನಿರ್ಣಯ
*   ಬೆಂ.ವಿವಿ ಕುಲಪತಿ-ಕುಲಸಚಿವರ ವಿರುದ್ಧ ರಾಜ್ಯಪಾಲರಿಗೆ ಸಿಂಡಿಕೇಟ್‌ನಿಂದ ದೂರು
*   ತಕ್ಷಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮನವಿ
 

Syndicate Members Complaint to Governor against Bangalore University Chancellor grg

ಬೆಂಗಳೂರು(ಮಾ.09): ಬೆಂಗಳೂರು ವಿಶ್ವವಿದ್ಯಾಲಯದ(Bangalore University) ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಮತ್ತು ಕುಲಸಚಿವ ಪ್ರೊ.ಕೊಟ್ರೇಶ್‌ ಅವರು ಕಾನೂನು ಬಾಹಿರವಾಗಿ ಸಿಂಡಿಕೇಟ್‌ ಸಭೆ ಮತ್ತು ವಿಶ್ವವಿದ್ಯಾಲಯದ ಆಡಳಿತ ನಡೆಸುತ್ತಿದ್ದು, ಅವರ ವಿರುದ್ಧ ತಕ್ಷಣ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ವಿವಿಯ ಕೆಲ ಸಿಂಡಿಕೇಟ್‌ ಸದಸ್ಯರು(Syndicate Members) ರಾಜ್ಯಪಾಲರಿಗೆ(Governor) ದೂರು ಸಲ್ಲಿಸಿದ್ದಾರೆ.
ಸರ್ಕಾರ ಹಾಗೂ ರಾಜ್ಯಪಾಲರಿಂದ ನಾಮ ನಿರ್ದೇಶನಗೊಂಡಿರುವ ಸಿಂಡಿಕೇಟ್‌ ಸದಸ್ಯರಾದ ಡಾ. ಎಚ್‌.ಸುಧಾಕರ್‌, ಎಂ.ಉದಯ ಕುಮಾರ್‌, ಗೋಪಿನಾಥ್‌, ಟಿ.ವಿ.ರಾಜು, ಡಾ. ಗೋವಿಂದರಾಜು, ಪ್ರೇಮ್‌ ಸೋಹಾನ್‌ ಲಾಲ್‌, ವಿದೇಯ ಬೆಳಗೋಡೆ ಶ್ರೀಕಂಠ ಅವರು ಇತ್ತೀಚೆಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು.

ದೂರಿನಲ್ಲಿ ಪ್ರಮುಖವಾಗಿ, ಕುಲಪತಿ ಅವರು ಸಿಂಡಿಕೇಟ್‌ ಸಭೆಗಳನ್ನು ಕಾನೂನು ಬಾಹಿರವಾಗಿ ನಡೆಸುತ್ತಿದ್ದಾರೆ. ಪ್ರತಿ ವರ್ಷ 8 ಸಭೆಗಳನ್ನು ನಡೆಸಬೇಕೆಂದು ನಿಯಮವಿದ್ದರೂ ಅವರ ಇದುವರೆಗಿನ ಎರಡೂವರೆ ವರ್ಷಕ್ಕೂ ಹೆಚ್ಚಿನ ಅಧಿಕಾರಾವಧಿಯಲ್ಲಿ ಕೇವಲ 13 ಸಭೆಗಳನ್ನು ನಡೆಸಿದ್ದಾರೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸದಸ್ಯರಿಗೆ ಓದಿ ತಿಳಿಸುವುದಿಲ್ಲ. ಸಿಂಡಿಕೇಟ್‌ ಕಾರ್ಯಸೂಚಿಗಳ ಪರಿಪೂರ್ಣ ಮಾಹಿತಿಯನ್ನು ಸದಸ್ಯರಿಗೆ ಒದಗಿಸುವುದಿಲ್ಲ. ಕೆಲವು ಸಲ ಸುಳ್ಳು ಮಾಹಿತಿ ನೀಡಿ ತಪ್ಪು ನಿರ್ಣಯಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೂರಿದ್ದಾರೆ.

Bangalore University ಯಡವಟ್ಟು: ಬಿ.ಕಾಂ ಪರೀಕ್ಷೆ 70 ಅಂಕಗಳಿಗೆ, ಸಿಕ್ಕಿದ್ದು 73 ಮಾರ್ಕ್ಸ್‌!

ಏಳು ಜನ ಸದಸ್ಯರು ತುಂಬಾ ತುರ್ತು ಮತ್ತು ಮಹತ್ವದ ವಿಷಯಗಳ ಬಗ್ಗೆ ಮನವಿ ನೀಡಿದಾಗ ಮಾತ್ರ ವಿಶೇಷ ಸಿಂಡಿಕೇಟ್‌ ಕರೆಯಬೇಕು. ಆದರೆ, ಅನೇಕ ಬಾರಿ ನಾವು ಏಳು ಸದಸ್ಯರು ಮನವಿ ಮಾಡಿದರೂ ವಿಶೇಷ ಸಿಂಡಿಕೇಟ್‌ ಕರೆದಿಲ್ಲ. ಕೆಲವು ಸಲ ಅವರೇ ಕರೆದ ವಿಶೇಷ ಸಿಂಡಿಕೇಟ್‌ ಸಭೆಯಲ್ಲಿ ಸರ್ಕಾರ ಹಾಗೂ ರಾಜ್ಯಪಾಲರಿಂದ ನಾಮನಿರ್ದೇಶಿತಗೊಂಡ ಸದಸ್ಯರು ಭಾಗವಹಿಸದಿದ್ದರೂ ಕಾನೂನು ಬಾಹಿರವಾಗಿ ಹಲವು ನಿರ್ಣಯಗಳನ್ನು ಕೈಗೊಂಡು ನಿಯಮ ಉಲ್ಲಂಘನೆ ಮಾಡಿದ್ದಾರೆ. ಯಾವುದೇ ಸಭೆಯಲ್ಲಿ ಕನಿಷ್ಠ ಏಳು ಜನರ ಸದಸ್ಯ ಬಲ ಇರಬೇಕೆಂದು ನಿಯಮವಿದ್ದರೂ ಸಂಖ್ಯಾ ಬಲ ಇಲ್ಲದಿದ್ದರೂ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಹಾಗಾಗಿ ಕೂಡಲೇ ಕುಲಪತಿ(Chancellor) ಹಾಗೂ ಕುಲಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಕೋರಿದ್ದಾರೆ.

ಅಲ್ಲದೆ, ಬೆಂಗಳೂರು ವಿವಿಯ ಆಡಳಿತ ಕಚೇರಿಯ ಬೋರ್ಡ್‌ ರೂಂನಲ್ಲಿ ಫೆ.9ರಂದು ನಡೆಸಿದ 163ನೇ ಸಿಂಡಿಕೇಟ್‌ ಸಭೆಯಲ್ಲಿ ಏಕಾಏಕಿ ಶಿಕ್ಷಕೇತರ ನೌಕರರ ಸಂಘದವರು ಸಿಂಡಿಕೇಟ್‌ ಸದಸ್ಯರನ್ನು ಮನೆಗೆ ಹೋಗಲು ಬಿಡದೆ ಮುಷ್ಕರ ನಡೆಸಿ ಅಶಿಸ್ತು ತೋರಿದ್ದಾರೆ. ಅವರ ವಿರುದ್ಧ ಕುಲಪತಿ ಅವರು ಯಾವುದೇ ಶಿಸ್ತು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸದಸ್ಯರು ಪತ್ರದಲ್ಲಿ ಆರೋಪಿಸಿದ್ದಾರೆ.

ಸಹಸ್ರಾರು ಉತ್ತರ ಪತ್ರಿಕೆಗಳಲ್ಲಿ ಅಕ್ರಮ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ(Bangalore University) 804 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ (OMR) ಅಂಕಗಳ ತಿದ್ದುಪಡಿ ಅಕ್ರಮ ಸಂಬಂಧ ಸಿಐಡಿ(CID) ನಡೆಸಿದ ತನಿಖೆಯಲ್ಲಿ ಸಾವಿರಾರು ಒಎಂಆರ್‌ ಶೀಟ್‌ಗಳಲ್ಲಿ ಅಂಕಗಳನ್ನು ತಿದ್ದಿರುವುದು ಬಯಲಾಗಿದೆ. ಇದರ ಬೆನ್ನಲ್ಲೆ ತನಿಖಾಧಿಕಾರಿಗಳು ಪ್ರಕರಣ ಸಂಬಂಧ ವಿವಿಯ ಸಿಬ್ಬಂದಿಯೋರ್ವನನ್ನು ವಶಕ್ಕೆ ಪಡೆದಿದ್ದ ಘಟನೆ ಫೆ.17 ರಂದು ನಡೆದಿತ್ತು.

ಪ್ರಕರಣದ ತನಿಖೆ(Investigation) ನಡೆಸುತ್ತಿರುವ ಸಿಐಡಿ ಪೊಲೀಸರು(CID Police) ಪ್ರಕರಣ ಬೆಳಕಿಗೆ ಬಂದಾಗ ವಿವಿಯ ಮೌಲ್ಯಮಾಪನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ಅಲ್ಲದೆ ತನಿಖೆಯಲ್ಲಿ ವಿವಿ ನೀಡಿದ 804 ಒಎಂಆರ್‌ಗಳಷ್ಟೇ ಅಲ್ಲ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ(Students) ಉತ್ತರ ಪತ್ರಿಕೆಗಳ ಅಂಕಗಳನ್ನು ತಿದ್ದಿರುವುದು ಬಯಲಾಗಿದೆ ಎಂದು ಸಿಐಡಿ ತನಿಖಾಧಿಕಾರಿಗಳು ಹೇಳುತ್ತಿರುವುದಾಗಿ ವಿವಿಯ ಮೂಲಗಳು ತಿಳಿಸಿವೆ. ಈ ಮೂಲಕ ಅಕ್ರಮವಾಗಿ(Illegal) ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಅಲ್ಲದೆ ಹಲವು ವಿದ್ಯಾರ್ಥಿಗಳ ಅಂಕಗಳನ್ನು ತಿದ್ದಿ ಅವರಿಗೆ ಇನ್ನೂ ಉತ್ತಮ ಅಂಕ ನೀಡಿ ಅವರನ್ನು ಉನ್ನತ ದರ್ಜೆಯಲ್ಲಿ ಅಕ್ರಮವಾಗಿ ಪಾಸ್‌ ಮಾಡಿರುವುದು ಬಯಲಾಗಿತ್ತು. 
 

Latest Videos
Follow Us:
Download App:
  • android
  • ios