Textbook Revision Row: ಬಸವಣ್ಣ ಪಠ್ಯ ವಿರುದ್ಧ ಶ್ರೀಗಳ ಹೋರಾಟ ಎಚ್ಚರಿಕೆ

*  ಬಸವಣ್ಣ ಬಗ್ಗೆ ಪಠ್ಯದಲ್ಲಿ ತಪ್ಪು ಮಾಹಿತಿ
*  ಸರಿಪಡಿಸಲು ಸಿಎಂಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಪತ್ರ
*  ಎಲ್ಲ ದೋಷ ಸರಿಪಡಿಸಿ ಪಠ್ಯಪುಸ್ತಕ ಮುದ್ರಿಸಬೇಕು

Swamijis Likely Held Protest Against Textbook Revision Controversy in Karnataka grg

ಬೆಂಗಳೂರು(ಜೂ.02): ಲಿಂಗಾಯತ ಧರ್ಮ ಗುರು ಬಸವಣ್ಣನವರ ಬಗ್ಗೆ ಪಠ್ಯದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ. ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಮಠಾಧಿಪತಿಗಳು ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ಭಾಲ್ಕಿಯ ಡಾ.ಬಸವಲಿಂಗ ಸ್ವಾಮೀಜಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, 9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನವರನ್ನು ಕುರಿತ ಪಾಠದಲ್ಲಿ ಕೆಲ ಬದಲಾವಣೆ ಮಾಡಿ ಪ್ರಕಟಿಸಿರುವುದು ಕುಚೋದ್ಯದ ಸಂಗತಿಯಾಗಿದೆ. ಈ ಅನೈತಿಕ ತಪ್ಪುಗಳನ್ನು ಸರಿಪಡಿಸಿ ಪ್ರಕಟಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪಠ್ಯದಲ್ಲಿ ಬಸವಣ್ಣನವರಿಗೆ ಅಪಮಾನ ಮಾಡಿದ ವಿಚಾರದ ಬಗ್ಗೆ ಸಿಎಂ ಗಂಭೀರವಾಗಿ ಪರಿಗಣಿಸಬೇಕು: ಜಗದೀಶ್ ಶೆಟ್ಟರ್!

ಉಪನಯನದ ನಂತರ ಬಸವಣ್ಣ ಕೂಡಲ ಸಂಗಮಕ್ಕೆ ನಡೆದರು ಎಂದು ಬರೆಯಲಾಗಿದೆ. ಇದು ತಪ್ಪು. ತಮ್ಮ ಸಹೋದರಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿ ಕೂಡಲ ಸಂಗಮಕ್ಕೆ ಹೋಗಿದ್ದು ಇದು ಐತಿಹಾಸಿಕ ಸಂಗತಿಯಾಗಿದೆ. ಶೈವ ಗುರುಗಳ ಸಾನಿಧ್ಯದಲ್ಲಿ ಬಸವಣ್ಣ ಲಿಂಗ ದೀಕ್ಷೆ ಪಡೆದರು ಎಂದಿದೆ. ಇದು ಸರಿಯಲ್ಲ. ಶೈವ ಗುರುಗಳು ಗುಡಿ-ಗುಂಡಾರಗಳಲ್ಲಿರುವ ಸ್ಥಾವರ ಲಿಂಗಾರಾಧಕರು. ಇವರು ಹೇಗೆ ಲಿಂಗ ದೀಕ್ಷೆ ಕೊಡುತ್ತಾರೆ? ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿ ಬಂದಿದ್ದು ಎಂದು ವಿವರಿಸಿದ್ದಾರೆ.

ಇಷ್ಟಲಿಂಗದ ಜನಕ:

ಬಸವಣ್ಣನವರು ಇಷ್ಟಲಿಂಗದ ಜನಕರಾಗಿದ್ದಾರೆ. ಅಲ್ಲಮಪ್ರಭು ಸೇರಿದಂತೆ ಎಲ್ಲ ಶರಣರು ತಮ್ಮ ವಚನಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ‘ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ’ ಎಂದು ಚನ್ನಬಸವಣ್ಣನವರು ಉಲ್ಲೇಖಿಸಿದ್ದಾರೆ. ‘ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೆ ರೂಪಾದೆ’ ಎಂದು ಬಸವಣ್ಣನವರು ಸ್ವತಃ ತಮ್ಮ ವಚನದಲ್ಲಿ ಹೇಳಿದ್ದಾರೆ ಎಂದು ಸ್ಮರಿಸಿದ್ದಾರೆ.

ಬಸವಣ್ಣ ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂದು ಪಠ್ಯದಲ್ಲಿ ಈಗ ಸೇರಿಸಲಾಗಿದ್ದು, ಇದು ಸಹ ಶುದ್ಧ ತಪ್ಪು. ವೀರಶೈವವು ಲಿಂಗಾಯತ ಧರ್ಮದ ಒಂದು ಪಂಗಡ ಎಂದು ಹೆಸರಿಸಲಾಗಿದೆ. ಸರ್ಕಾರದ ದಾಖಲೆಗಳಲ್ಲಿ ಕ್ರಿ.ಶ.1871 ರಿಂದಲೂ ಇದನ್ನು ಕಾಣಬಹುದಾಗಿದೆ. ಬಸವಣ್ಣನವರು ಲಿಂಗಾಯತ ಧರ್ಮದ ಸ್ಥಾಪಕರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಬಸವಣ್ಣ ಪಠ್ಯ ತಿದ್ದುಪಡಿ ನೋಡಿ ಎದೆಗೆ ಕಲ್ಲು ಹೊಡೆದಂತಾಗಿದೆ: ಕೂಡಲ ಶ್ರೀ

ಶೈವದಲ್ಲಿ ವರ್ಣಾಶ್ರಮದ ಆಚರಣೆಯಿದೆ. ಲಿಂಗಾಯತರಲ್ಲಿ ವರ್ಣಾಶ್ರಮ ಭೇದಗಳಿಲ್ಲ. ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂಬುದು ಶುದ್ಧ ಅನೈತಿಕವಾಗಿದೆ. ಕಳೆದ ವರ್ಷ ಪಠ್ಯದಲ್ಲಿದ್ದ ವೈದಿಕ ಧರ್ಮದ ಆಚರಣೆಗಳ ನಿರಾಕರಣೆ, ಮಾನವೀಯ ಮೌಲ್ಯಗಳಿಂದ ಕೂಡಿದ ಸಿದ್ಧಾಂತದ ಪ್ರತಿಪಾದನೆ, ಅನಿಷ್ಟಪದ್ಧತಿಗಳ ವಿರುದ್ಧದ ಹೋರಾಟ, ಸ್ವಾವಲಂಬನೆ, ದೇಹವೇ ದೇಗುಲ ತತ್ವಗಳ ಬೋಧನೆ, ಕನ್ನಡ ಬಳಕೆ ಮಾಡಿದ್ದನ್ನೂ ತೆಗೆದು ಹಾಕಲಾಗಿದ್ದು ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಎಲ್ಲ ದೋಷಗಳನ್ನು ಸರಿಪಡಿಸಿ ಪಠ್ಯಪುಸ್ತಕ ಮುದ್ರಿಸಬೇಕು. ತಪ್ಪು ಸಂದೇಶ ನೀಡಿದರೆ ಲಿಂಗಾಯತ ಧರ್ಮಕ್ಕೆ ಮತ್ತು ಬಸವಣ್ಣನವರಿಗೆ ಅಪಚಾರ ಎಸಗಿದಂತಾಗುತ್ತದೆ. ಲಿಂಗಾಯತ ಧರ್ಮದ ಅನುಯಾಯಿ ಮತ್ತು ಬಸವಣ್ಣನವರ ಹೆಸರಿನವರಾದ ನೀವು ಮುಖ್ಯಮಂತ್ರಿಯಾಗಿದ್ದಾಗಲೇ ಇಂತಹ ಅಪಚಾರ ಆಗಿರುವುದು ಆಘಾತಕಾರಿಯಾಗಿದೆ. ಲಿಂಗಾಯತ ಮಠಾಧಿಪತಿಗಳು ಬೃಹತ್‌ ಪ್ರತಿಭಟನೆ ನಡೆಸುವ ಮುನ್ನ ತಪ್ಪುಗಳನ್ನು ಸರಿ ಪಡಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios