‘ಸುವರ್ಣ ಶಿಕ್ಷಣ ಮೇಳ’ ಆಯೋಜನೆಯಿಂದ ಒಂದೇ ಸೂರಿನಡಿ ವಿದ್ಯಾರ್ಥಿಗಳು, ಪೋಷಕರಿಗೆ ಶಿಕ್ಷಣ ಸಂಸ್ಥೆಗಳ ಮಾಹಿತಿ ಸಿಗುತ್ತಿದೆ ಎಂದು ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮೇ.26): ‘ಸುವರ್ಣ ಶಿಕ್ಷಣ ಮೇಳ’ ಆಯೋಜನೆಯಿಂದ ಒಂದೇ ಸೂರಿನಡಿ ವಿದ್ಯಾರ್ಥಿಗಳು, ಪೋಷಕರಿಗೆ ಶಿಕ್ಷಣ ಸಂಸ್ಥೆಗಳ ಮಾಹಿತಿ ಸಿಗುತ್ತಿದೆ ಎಂದು ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರಂ ಸರ್ಕಲ್‌ನ ಸರ್ಕಾರಿ ಶಾಲೆ ಮೈದಾನದಲ್ಲಿ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನಿಂದ ಆಯೋಜಿಸಿದ್ದ ಎರಡು ದಿನಗಳ ‘ಸುವರ್ಣ ಶಿಕ್ಷಣ ಮೇಳ’ದ ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಭಾನುವಾರ ನೆನಪಿನ ಕಾಣಿಕೆ ವಿತರಿಸಿ ಅವರು ಮಾತನಾಡಿದರು.

ಒಂದೇ ಸೂರಿನಲ್ಲಿ 50 ಕ್ಕೂ ಅಧಿಕ ಕಾಲೇಜು. ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಮಗ್ರ ಮಾಹಿತಿ ನೀಡುವಂತೆ ವ್ಯವಸ್ಥೆ ಮಾಡಿರುವ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಹತ್ವ ನೀಡಬೇಕು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಈ ಮೇಳದಿಂದಾಗಿ ಶಿಕ್ಷಣ ಸಂಸ್ಥೆಗಳ ವಿವರ, ಶುಲ್ಕ, ಮೂಲಸೌಕರ್ಯ ಸೇರಿದಂತೆ ಅಗತ್ಯ ಮಾಹಿತಿ ಲಭಿಸಲಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಆಯ್ಕೆ ಸುಲಭವಾಗಲಿದೆ. ಶಿಕ್ಷಣ ಕ್ಷೇತ್ರವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಪ್ರಮುಖವಾದುದಾಗಿದೆ. ಶಿಕ್ಷಣ ಎಂದರೆ ಮಲ್ಲೇಶ್ವರಂ, ಮಲ್ಲೇಶ್ವರಂ ಎಂದರೆ ಶಿಕ್ಷಣ ಎನ್ನುವ ಪರಿಸ್ಥಿತಿ ಇದೆ. ಇಂತಹದ್ದರಲ್ಲಿ ಪ್ರತಿ ವರ್ಷವೂ ನಮ್ಮ ಮಲ್ಲೇಶ್ವರಂನಲ್ಲಿ ಶಿಕ್ಷಣ ಮೇಳ ಆಯೋಜಿಸುತ್ತಿರುವುದಕ್ಕೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು. ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ರಾಜಕೀಯ ವಿಭಾಗದ ಸಂಪಾದಕ ಪ್ರಶಾಂತ್‌ ನಾತು ಮತ್ತಿತರರು ಹಾಜರಿದ್ದರು.

ತುಂಬಾ ಖುಷಿಯಾಯಿತು: ಸುವರ್ಣ ಶಿಕ್ಷಣ ಮೇಳಕ್ಕೆ ಆಗಮಿಸಿದ್ದರಿಂದ ನನಗೆ ತುಂಬಾ ‌ಖುಷಿ ಆಯಿತು. ನಾನು ಭೇಟಿ ನೀಡಿರುವ ಬಹುತೇಕ ಕಾಲೇಜುಗಳು ಮೇಳದಲ್ಲಿ ಭಾಗವಹಿಸಿವೆ. ಸಿಬ್ಬಂದಿಯನ್ನು ನೋಡಿ ನನಗೆ ತುಂಬಾ ಸಂತಸವಾಯಿತು ಎಂದು ನಟ ವಿನೋದ್‌ ಪ್ರಭಾಕರ್‌ ಹರ್ಷ ವ್ಯಕ್ತಪಡಿಸಿದ್ದಾರೆ. ನಾವು ಅಭ್ಯಾಸ ಮಾಡುವ ಸಮಯದಲ್ಲಿ ಈ ರೀತಿ ಎಕ್ಸ್‌ಪೋಗಳು ಇರಲಿಲ್ಲ. ಪ್ರತಿ ಕಾಲೇಜಿಗೆ ಭೇಟಿ ನೀಡಬೇಕಿತ್ತು. ಮಾಹಿತಿ ಪಡೆದುಕೊಳ್ಳಲು ತುಂಬಾ ಕಷ್ಟವಾಗುತ್ತಿತ್ತು. ಆದರೆ ಈಗ ಆ ಸಮಸ್ಯೆ ಇಲ್ಲ. ಒಂದೇ ಸ್ಥಳದಲ್ಲಿ 50 ರಿಂದ 60 ಕಾಲೇಜುಗಳು ಭಾಗವಹಿಸಿವೆ. ಯಾವ ಕೋರ್ಸ್ ಓದಬೇಕು, ಯಾವ ಕಾಲೇಜು ಸೇರಬೇಕು ಎಂಬುದನ್ನು ನಿರ್ಧರಿಸಲು ಎಲ್ಲಾ ಮಾಹಿತಿ ಒಂದೇ ಕಡೆ ಸಿಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ನಟಿ ಸೋನಾಲ್ ಮಂಥೆರೋ ಮಾತನಾಡಿ, ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಈ ಮೇಳ ಆಯೋಜಿಸಿರುವುದಕ್ಕೆ ತುಂಬಾ ಖುಷಿಯಾಗಿದೆ. ಮೇಳ ಆಯೋಜನೆಯಿಂದ ವಿದ್ಯಾರ್ಥಿಗಳು, ಪೋಷಕರಿಗೆ ಬಹಳಷ್ಟು ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಇಂತಹ ಶಿಕ್ಷಣ ಮೇಳಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.