ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಯಲ್ಲಿ ಕನ್ನಡ ನಿತ್ಯೋತ್ಸವ..!

ಸಾಮಾನ್ಯ ಮಕ್ಕಳಂತೆ ಸರ್ಕಾರಿ ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಸುದರ್ಶನ್‌ ಮೂಡುಬಿದಿರೆ ಮಕ್ಕಳು

Sudarshan Moodbidri Admission His Children's to Government School in Dakshina Kannada grg

ಸಂದೀಪ್‌ ವಾಗ್ಲೆ

ಮಂಗಳೂರು(ನ.01):  ಕನ್ನಡ ರಾಜ್ಯೋತ್ಸವ ಬಂತೆಂದರೆ ನಾಡು- ನುಡಿ, ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖ ಭಾಷಣ ಮಾಡುವ ಬಹುತೇಕ ಎಲ್ಲ ರಾಜಕಾರಣಿಗಳು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕಲಿಸುತ್ತಿದ್ದರೆ, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಮಾತ್ರ ಇದಕ್ಕೆ ಅಪವಾದ. ರಾಜ್ಯಾದ್ಯಂತ ಕನ್ನಡ ಶಾಲೆಗಳು ಮುಚ್ಚುತ್ತಿರುವ ‘5ಜಿ’ ಜಮಾನದಲ್ಲೀಗ ಇವರ ಮೂವರೂ ಮಕ್ಕಳು ಕನ್ನಡ ಶಾಲೆಯಲ್ಲೇ ಕಲಿಯುತ್ತಿದ್ದಾರೆ, ಅದೂ ಸರ್ಕಾರಿ ಶಾಲೆಯಲ್ಲಿ ಎನ್ನುವುದು ವಿಶೇಷ! ನಿಜವಾದ ಅರ್ಥದಲ್ಲಿ ಸುದರ್ಶನ್‌ ಅವರ ಮನೆಯಲ್ಲಿ ಕನ್ನಡಾಂಬೆಗೆ ನಿತ್ಯೋತ್ಸವ..

ರಾಜಕಾರಣಿಗಳು ಮಾತ್ರವಲ್ಲದೆ, ಬಡತನವಿದ್ದರೂ ಮಕ್ಕಳನ್ನು ಇಂಗ್ಲಿಷ್‌ ಶಾಲೆಗೆ ಕಳಿಸುವ ಎಲ್ಲರಿಗೂ ಸುದರ್ಶನ್‌ ಅವರು ದೇಸಿ ಸಂಸ್ಕಾರದ ಹೊಸ ಮಾದರಿಯನ್ನು ಸಮಾಜದ ಮುಂದಿಟ್ಟಿದ್ದಾರೆ. ‘ದೊಡ್ಡವರ’ ಮಕ್ಕಳು ದೊಡ್ಡ ಶಾಲೆಗೇ ಹೋಗ್ತಾರೆ ಎನ್ನುವುದನ್ನು ಸುಳ್ಳು ಮಾಡಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಸಾಮಾನ್ಯ ಜನರ ಮಕ್ಕಳೊಂದಿಗೆ ಬೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಒಂದೂವರೆ ಶತಮಾನ ಪೂರೈಸಿದ ಸರ್ಕಾರಿ ಶಾಲೆಯೊಂದರ ಉಳಿವಿಗೂ ಇದು ನಾಂದಿ ಹಾಡಿದೆ.

ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ Jr.NTR

ಅಜ್ಜ ಕಲಿತ ಶಾಲೆಗೆ ಮೊಮ್ಮಕ್ಕಳು: ಮೂಡುಬಿದಿರೆ ಮೈನ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದರ್ಶನ್‌ ಅವರ ಹಿರಿಯ ಪುತ್ರ ಹೃದಯೇಶ 5ನೇ ತರಗತಿಯಲ್ಲಿ ಕಲಿಯುತ್ತಿದ್ದರೆ, 2ನೇ ಪುತ್ರ ಕೃಪೇಶ ಅದೇ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿ. ಕಿರಿಮಗ ಚಿರಂಜೀವೇಶ ಈ ವರ್ಷ ಅಂಗನವಾಡಿ, ಮುಂದಿನ ವರ್ಷ ಅದೇ ಶಾಲೆಯಲ್ಲಿ 1ನೇ ತರಗತಿಗೆ ದಾಖಲಾಗಲು ಅಣಿಯಾಗುತ್ತಿದ್ದಾನೆ. 150ಕ್ಕೂ ಅಧಿಕ ಸಂವತ್ಸರಗಳನ್ನು ಪೂರೈಸಿದ ಈ ಶಾಲೆಯಲ್ಲಿ ಸ್ವತಃ ಸುದರ್ಶನ್‌ ಕಲಿತದ್ದು ಮಾತ್ರವಲ್ಲ, ಅವರ ತಂದೆ, ಸಹೋದರರೂ ಕೂಡ ಇದೇ ಶಾಲೆಯ ಹಳೆ ವಿದ್ಯಾರ್ಥಿಗಳು. ಇದೀಗ ಅಜ್ಜ ಕಲಿತ ಶಾಲೆ ಬೆಂಚಿನಲ್ಲಿ ಕುಳಿತು ಮೊಮ್ಮಕ್ಕಳು ಕನ್ನಡ ಕಲಿಯುತ್ತಿರುವುದು ವಿಶೇಷ.

ಸರ್ಕಾರಿ ಶಾಲೆಯಲ್ಲೇ ಖುಷಿ: ಸುದರ್ಶನ್‌ ಅವರ ಬಹುತೇಕ ಸಂಬಂಧಿಕರು ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದಲ್ಲೇ ಓದಿಸುತ್ತಿದ್ದಾರೆ. ಆದರೆ ತಮ್ಮ ತಂದೆ ಬಿಜೆಪಿ ಜಿಲ್ಲಾಧ್ಯಕ್ಷರು.. ರಾಷ್ಟ್ರೀಯ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುವವರು.. ಸುತ್ತೆಲ್ಲ ಗೌರವ- ಸಮ್ಮಾನಗಳು ನಡೆಯುತ್ತಿರುವುದನ್ನು ನೋಡುತ್ತಿದ್ದರೂ ಸುದರ್ಶನ್‌ ಅವರ ಮಕ್ಕಳಿಗೆ ಸರ್ಕಾರಿ ಕನ್ನಡ ಶಾಲೆಯೇ ಅಪ್ಯಾಯಮಾನ. ಈ ಬಗ್ಗೆ ಅವರಿಗೆ ಕೀಳರಿಮೆ ಕಾಡಿಲ್ಲ, ಇಂಗ್ಲಿಷ್‌ ಶಾಲೆಗೆ ಸೇರಬೇಕು ಎನ್ನುವ ಹಂಬಲವೂ ಇಲ್ಲ. ಸಹಪಾಠಿಗಳೊಂದಿಗೆ ತಾವೂ ಸಾಮಾನ್ಯರಂತೆ ಸರ್ಕಾರಿ ಶಾಲೆಯಲ್ಲಿ ಆಡಿ-ಕಲಿಯುವ ಖುಷಿಯ ದಿನಗಳನ್ನು ಕಳೆಯುತ್ತಿದ್ದಾರೆ.

ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಆಗಲಿ: ನನ್ನ ಮಕ್ಕಳು ಸರ್ಕಾರಿ ಶಾಲೆಗೆ ಹೊಂದಿಕೊಂಡಿದ್ದಾರೆ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು ಎನ್ನುವುದು ನಮ್ಮ ಪರಿವಾರದ ಚಿಂತನೆಯಾಗಿತ್ತು. ವಿಜ್ಞಾನಿಗಳೂ ಇದನ್ನೇ ಹೇಳುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ದೊರೆತರೆ ನಾಡಿನ ಸಂಸ್ಕೃತಿ, ಭಾಷೆಯ ಹಿಡಿತ, ಪರಂಪರೆ ಎಲ್ಲದರ ಅರಿವು ಆಗುತ್ತದೆ. ಆದರೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣದಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮಾತ್ರವಲ್ಲದೆ, ಸರ್ಕಾರಿ ಶಾಲೆಯಲ್ಲಿ ಸಾಮಾನ್ಯ ಜನರ ಮಕ್ಕಳೊಂದಿಗೆ ಬೆರೆಯುತ್ತಾರೆ. ಮಕ್ಕಳ ಭವಿಷ್ಯಕ್ಕೆ ಅದುವೇ ದೊಡ್ಡ ಜೀವನ ಪಾಠವಾಗುತ್ತದೆ ಎನ್ನುತ್ತಾರೆ ಸುದರ್ಶನ್‌ ಮೂಡುಬಿದಿರೆ.
ಮಾತೃಭಾಷೆ ಶಿಕ್ಷಣದ ಬಗ್ಗೆ ಸಾಕಷ್ಟುಕಡೆ ಭಾಷಣ ಮಾಡುತ್ತೇವೆ. ಆಡಿದ ಮಾತನ್ನು ಅನುಷ್ಠಾನ ಮಾಡದಿದ್ದರೆ ನಮಗೆ ನೈತಿಕತೆ ಇರುವುದಿಲ್ಲ. ನಮ್ಮ ಸಂಸ್ಕೃತಿ, ಸಂಸ್ಕಾರ, ಭಾಷೆ ಉಳಿಬೇಕಾದರೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಇನ್ನೊಬ್ಬರಿಗೆ ಹೇಳಬೇಕಾದರೆ ನಮ್ಮಲ್ಲಿ ನೈತಿಕತೆ ಇರಬೇಕು ಎನ್ನುವ ಕಿವಿಮಾತು ಸುದರ್ಶನ್‌ ಅವರದ್ದು.

Koti Kanta Gaayana: ನೆಲ,ಜಲ, ಆಗಸದಲ್ಲೂ ಮೊಳಗಿತು ಕನ್ನಡ ಡಿಂಡಿಮ..!

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರಿಕೆ

ಸುದರ್ಶನ್‌ ಅವರು ತಮ್ಮ ಮಕ್ಕಳನ್ನು ಮೂಡುಬಿದಿರೆ ಮೈನ್‌ ಸರ್ಕಾರಿ ಶಾಲೆಗೆ ಕಳುಹಿಸಿದ ಬಳಿಕ ಆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. 158 ಇದ್ದ ಮಕ್ಕಳ ಸಂಖ್ಯೆ ಈಗ 238ಕ್ಕೆ ಏರಿದೆ. ಮುಂದಿನ ವರ್ಷ 300ಕ್ಕೆ ಏರಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಇವರಿಂದ ಪ್ರೇರಣೆ ಪಡೆದು ಅನೇಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದ್ದಾರೆ. ‘ಖಾಸಗಿ ಶಾಲೆಗಳಿಗಿಂತ ಹೆಚ್ಚೇ ಗುಣಮಟ್ಟದ ಶಿಕ್ಷಣ ಕೆಲವು ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿದೆ. ಎಲ್ಲರೂ ಇದನ್ನು ಅರಿತು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ, ಕನ್ನಡ ಶಾಲೆಗಳನ್ನು ಉಳಿಸಬೇಕು’ ಎನ್ನುತ್ತಾರೆ ಸುದರ್ಶನ್‌.

ಬಹಳಷ್ಟು ಜನರು ಮನೆಯಲ್ಲಿ ತೀವ್ರ ಬಡತನ ಇದ್ದರೂ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗೇ ಕಳುಹಿಸುತ್ತಾರೆ. ದೊಡ್ಡವರ ಮಕ್ಕಳ ರೀತಿಯಲ್ಲೇ ತಮ್ಮ ಮಕ್ಕಳನ್ನೂ ಬೆಳೆಸಬೇಕು ಎಂದು ಪ್ರಯತ್ನಪಡುತ್ತಾರೆ. ಮಕ್ಕಳು ಕೂಡ ಮಾನಸಿಕವಾಗಿ ಅದೇ ರೀತಿ ಬೆಳೆಯುತ್ತಾರೆ, ಅವರಿಗೆ ಕಷ್ಟದ ಜೀವನದ ಅರಿವು ಇರುವುದಿಲ್ಲ. ಸಾಮಾನ್ಯ ಮಕ್ಕಳ ಜತೆ ಬೆರೆತಾಗ ಎಳವೆ ಮನಸ್ಸಿನಲ್ಲೇ ಮಕ್ಕಳಿಗೆ ಜೀವನ ಪಾಠ ಸಿಗುತ್ತದೆ ಅಂತ ಸುದರ್ಶನ್‌ ಮೂಡುಬಿದಿರೆ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios