ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಭಯಪಡುವ ಅಗತ್ಯವಿಲ್ಲ, ಗಂಭೀರವಾಗಿ ಪರಿಗಣಿಸಿ: ಮಧು ಬಂಗಾರಪ್ಪ
ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯಪಡುವ ಅಗತ್ಯವಿಲ್ಲ. ಆದರೆ, ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಯತ್ನ ಪಟ್ಟರೆ ಯಾವುದೂ ಕಷ್ಟವಿಲ್ಲ. ಪ್ರಯತ್ನವೇ ನಮ್ಮ ಆಸ್ತಿಯಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಲಹೆ ನೀಡಿದರು.
ಮೈಸೂರು (ಫೆ.19): ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯಪಡುವ ಅಗತ್ಯವಿಲ್ಲ. ಆದರೆ, ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಯತ್ನ ಪಟ್ಟರೆ ಯಾವುದೂ ಕಷ್ಟವಿಲ್ಲ. ಪ್ರಯತ್ನವೇ ನಮ್ಮ ಆಸ್ತಿಯಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಲಹೆ ನೀಡಿದರು. ನಗರದ ಶಕ್ತಿಧಾಮ ಟ್ರಸ್ಟ್ ನ ಶಕ್ತಿಧಾಮ ವಿದ್ಯಾಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ತಜ್ಞರ ಸಲಹೆ ಸೂಚನೆಗಳನ್ನು ಪರಿಗಣಿಸಿ ಎಲ್ಲರಿಗೂ ಸಮಾನವಾದ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಜಾತಿ, ಧರ್ಮ ಸೇರಿದಂತೆ ಯಾವುದೇ ಬೇಧವಿಲ್ಲದೆ ಕಲಿಯುವ ವಾತಾವರಣವನ್ನು ನಿರ್ಮಿಸುತ್ತೇವೆ. ಎಲ್ಲಾ ಸಾಧಕರು ಸರ್ಕಾರಿ ಶಾಲೆಯಲ್ಲಿಯೇ ಓದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುತ್ತಿದ್ದು, ಶಿಕ್ಷಣ ಕ್ಷೇತ್ರದ ಪ್ರಗತಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು. ಹಿಂದೆ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ತಂದೆ ತಾಯಿಗಳು ಕೂಲಿ ಮಾಡುತ್ತಿದ್ದರಿಂದ ಎಲ್ಲರಿಗೂ ಶಿಕ್ಷಣ ಸಿಗುತ್ತಿರಲಿಲ್ಲ. ಈಗ ಎಲ್ಲರಿಗೂ ಉಚಿತ ಶಿಕ್ಷಣ ಸಿಗುತ್ತಿದೆ. ರಾಜ್ಯದ 1.20 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯಲ್ಲಿ ಇದ್ದಾರೆ.
ರಸಗೊಬ್ಬರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿ ಹೊರಹೊಮ್ಮುತ್ತಿದೆ: ಭಗವಂತ ಖೂಬಾ
ಸರ್ಕಾರಿ ಶಾಲೆಯ ಮಕ್ಕಳು ನೆಲದ ಮೇಲೆ ಕೂರಬಾರದು, ಎಲ್ಲಾ ಮಕ್ಕಳು ಬೆಂಚಿನ ಮೇಲೆ ಕೂರುವ ವ್ಯವಸ್ಥೆ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು. ಸರ್ಕಾರದ ಸುಧಾರಣೆಗಳ ಮೂಲಕ ಪ್ರತಿಯೊಬ್ಬರು ಕಡ್ಡಾಯ ಶಿಕ್ಷಣ ಪಡೆಯುವಂತಾಗಿದೆ. ಆರೋಗ್ಯದ ಜೊತೆಗೆ ಶಿಕ್ಷಣ ಎಂಬಂತೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೌಷ್ಟಿಕ ಆಹಾರ, ಹಾಲು, ಮೊಟ್ಟೆ ನೀಡಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಬಜೆಟ್‌ನಲ್ಲಿ 44,400 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು. ಕೆಎಂಎಫ್‌ಅಧ್ಯಕ್ಷ ಭೀಮಾ ನಾಯಕ್ ಮಾತನಾಡಿ, ಕೆಎಂಎಫ್ ನಿಂದ ಶಕ್ತಿಧಾಮಕ್ಕೆ ನಿತ್ಯ 55 ಲೀಟರ್‌ಹಾಲು ಬರುತ್ತಿದೆ. ಮಕ್ಕಳಿಗಾಗಿ ನಂದಿನಿ ಚಾಕೋಲೇಟ್ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಭವಿಷ್ಯದಲ್ಲಿ ಬಡವರಿಗಾಗಿ ಮತ್ತಷ್ಟು ಗ್ಯಾರಂಟಿ ಯೋಜನೆ: ಸಚಿವ ಡಿ.ಸುಧಾಕರ್
ಶಕ್ತಿಧಾಮದ ಅಧ್ಯಕ್ಷೆ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಶೋಷಣೆಗೊಳಗಾದ ಮಕ್ಕಳಿಗಾಗಿಯೇ ಶಕ್ತಿಧಾಮ ಕಾರ್ಯ ನಿರ್ವಹಿಸುತ್ತಿದೆ. ಇದುವರೆಗೂ 4 ಸಾವಿರ ಹೆಣ್ಣುಮಕ್ಕಳಿಗೆ ಪುನರ್ ವಸತಿ ಕಲ್ಪಿಸಲಾಗಿದೆ. ಉತ್ತರ ಕರ್ನಾಟಕದ ಮಕ್ಕಳು ಹೆಚ್ಚಿದ್ದಾರೆ. ಮಕ್ಕಳು ಮಲ್ಲಕಂಬ, ಜಿಮ್ನಾಸ್ಟಿಕ್‌ಕಲಿಯುತ್ತಿದ್ದಾರೆ. ಪ್ರಸ್ತುತ 260 ಮಕ್ಕಳು ಓದುತ್ತಿದ್ದಾರೆ ಎಂದು ವಿವರಿಸಿದರು. ನಟ ಶಿವರಾಜ್ ಕುಮಾರ್ ಮಾತನಾಡಿ, ನನ್ನನ್ನು ಸೇರಿದಂತೆ ಅನೇಕರು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಎಲ್ಲಿ ಓದುತ್ತೇವೆ ಎಂಬುದು ಮುಖ್ಯವಲ್ಲ. ಯಾವ ರೀತಿ ಓದುತ್ತೇವೆ ಎಂಬುದು ಮುಖ್ಯವಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಮನುಷ್ಯರಾದವರು ಇದ್ದಾರೆ ಎಂದು ತಿಳಿಸಿದರು. ಶಕ್ತಿಧಾಮದ ಸಂಚಾಲಕಿ ಮಂಜುಳ, ಶಕ್ತಿಧಾಮದ ಟ್ರಸ್ಟಿ ಸದಾನಂದ ಇದ್ದರು.