ಗದಗ: ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಿತ್ಯವೂ ಮರದ ಕೆಳಗೆ ಪಾಠ..!
ನಮ್ಮ ಊರಲ್ಲೇ ಶಾಲೆ ಇದ್ದರೂ ಮಕ್ಕಳನ್ನು ಬೇರೆಡೆ ಕಳುಹಿಸುವಂತಾಗಿದೆ. ಶೈಕ್ಷಣಿಕ ಸುಧಾರಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ಈ ಶಾಲೆಗೆ ಹೊಸ ಕೊಠಡಿ ನಿರ್ಮಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಗ್ರಾಮಸ್ಥರು
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ(ಫೆ.12): ತಾಲೂಕಿನ ಕೋಗನೂರ ಗ್ರಾಪಂ ವ್ಯಾಪ್ತಿಗೆ ಬರುವ ಗೋವನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೫೦ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲಾ ಕೊಠಡಿಗಳಿಲ್ಲದ ಕಾರಣ ನಿತ್ಯವೂ ಮರದ ಕೆಳಗೆ ಕುಳಿತು ಪಾಠ ಕೇಳುವ ಅನಿವಾರ್ಯತೆ ಎದುರಾಗಿದೆ.
ಈ ಶಾಲೆಯ ಅವ್ಯವಸ್ಥೆಗೆ ಬೇಸತ್ತು ಗ್ರಾಮದ ೪, ೫ ಮತ್ತು ೬ನೇ ತರಗತಿಯ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಊರಿನ ಶಾಲೆಗೆ ಹೋಗುತ್ತಿದ್ದಾರೆ. ನಮ್ಮ ಊರಲ್ಲೇ ಶಾಲೆ ಇದ್ದರೂ ಮಕ್ಕಳನ್ನು ಬೇರೆಡೆ ಕಳುಹಿಸುವಂತಾಗಿದೆ. ಶೈಕ್ಷಣಿಕ ಸುಧಾರಣೆಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ಈ ಶಾಲೆಗೆ ಹೊಸ ಕೊಠಡಿ ನಿರ್ಮಿಸುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಈಶ್ವರಪ್ಪ ವಿರುದ್ಧ ಕೇಸ್ ಮುಖೇನ ಕಾನೂನಿದೆ ಎಂಬುದು ಸಾಬೀತು: ಸಚಿವ ಮಧು ಬಂಗಾರಪ್ಪ
ಈ ಶಾಲೆಯಲ್ಲಿ ಅಡುಗೆ ಕೋಣೆ ಕೂಡ ಇಲ್ಲ. ಮಕ್ಕಳ ಓದಿಗಾಗಿ ಇರುವ ಐದು ಕೊಠಡಿಗಳಲ್ಲಿ ಒಂದರಲ್ಲಿ ನಿತ್ಯ ಬಿಸಿಯೂಟ ತಯಾರಿಸಲಾಗುತ್ತಿದೆ. ಮಕ್ಕಳಿಗೆ ಮರದ ನೆರಳು, ಬಯಲು ಜಾಗವೇ ಓದಿನ ಸ್ಥಳವಾಗಿದೆ. ಶಾಲೆಯ ಮುಖ್ಯ ಶಿಕ್ಷಕರು, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು ಹೊಸ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡುವಂತೆ ಕೇಳಿದರೂ ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ.
ಇನ್ನೂ ಆಟದ ಮೈದಾನ ಇಲ್ಲ. ಇದ್ದ ಜಾಗವನ್ನು ಬೇರೊಬ್ಬರೂ ಅತಿಕ್ರಮಣ ಮಾಡಿಕೊಂಡಿದ್ದು, ಸಮಸ್ಯೆ ಬಗೆಹರಿಸಿ ಆಟದ ಮೈದಾನಕ್ಕೆ ಅವಕಾಶ ಕಲ್ಪಿಸಿ ಕೊಡುವಂತೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿದ್ದು, ಮಕ್ಕಳ ಗೋಳನ್ನು ಯಾರೂ ಆಲಿಸುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ಒಂದರಿಂದ ಏಳನೇ ತರಗತಿ ವರೆಗೆ ಏಳು ಶಿಕ್ಷಕರಿದ್ದಾರೆ. ನಿತ್ಯವೂ ಎರಡು ಕ್ಲಾಸ್ ರೂಂ ವಿದ್ಯಾರ್ಥಿಗಳು ಮರದ ಕೆಳಗೆ ಕುಳಿತೆ ಪಾಠ ಕೇಳಬೇಕು. ಪಾಲಕರು ತಮ್ಮ ಮಕ್ಕಳು ಮರದ ಕೆಳಗೆ ನೆಲದ ಮೇಲೆ ಕುಳಿತು ಓದುವುದು, ಶಿಕ್ಷಕರು ಹೇಳುತ್ತಿರುವ ಪಾಠ ಆಲಿಸುವುದನ್ನು ನೋಡಿ ತೀವ್ರ ಬೇಸರಗೊಂಡಿದ್ದಾರೆ. ವ್ಯವಸ್ಥೆ ಸುಧಾರಿಸದಿದ್ದರೆ ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸುವ ನಿರ್ಧಾರ ಮಾಡಿದ್ದಾರೆ.
ಧಾರವಾಡ: ಸತತ 18 ವರ್ಷಗಳ ದಣಿವರಿಯದೆ ಸಂಶೋಧನೆ; 89ನೇ ವಯಸ್ಸಿನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ ವೃದ್ಧ!
ಶಿರಹಟ್ಟಿ ತಾಲೂಕಿನಲ್ಲಿಯ ಬಹುತೇಕ ಶಾಲೆಗಳ ದುರಸ್ತಿ ಕಾರ್ಯಕ್ಕೆ ಸರ್ಕಾರ ಅನುದಾನ ನೀಡಿದ್ದು, ದುರಸ್ತಿ ಕಾರ್ಯ ನಡೆದಿವೆ. ಈ ಶಾಲೆಯ ಕೋಣೆಗಳ ದುರಸ್ತಿ ಕಾರ್ಯ ನಡೆದಿದ್ದು, ಹಂತ ಹಂತವಾಗಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ತಿಳಿಸಿದ್ದಾರೆ.
ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ಯಾರೊಬ್ಬರೂ ಗ್ರಾಮೀಣ ಪ್ರದೇಶದ ಮಕ್ಕಳ ಓದಿಗೆ ಆಗುತ್ತಿರುವ ತೊಂದರೆ ಕುರಿತಾಗಿ ಇತ್ತ ಗಮನಿಸುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ. ೮ರಂದು ಜನರ ಅಹವಾಲು ಸ್ವೀಕರಿಸುವ ವೇಳೆ ನಮ್ಮ ಶಾಲಾ ಮಕ್ಕಳ ಓದಿಗೆ ಆಗುತ್ತಿರುವ ಹಿನ್ನಡೆ ಕುರಿತು ಲಿಖಿತ ಅರ್ಜಿ ಸಲ್ಲಿಸಿ ಬಂದಿದ್ದು, ಅವರಿಂದ ನಮ್ಮ ಮೊಬೈಲ್ ನಂಬರಿಗೆ ಅರ್ಜಿ ಸ್ವೀಕೃತಗೊಂಡ ಬಗ್ಗೆ ಸಂದೇಶ ಕೂಡ ಬಂದಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ತಳ್ಳಳ್ಳಿ ತಿಳಿಸಿದ್ದಾರೆ.